ಬೈಲಹೊಂಗಲ: ಮುಂಗಾರು ಬಂತೆಂದರೆ ರೈತರಿಗೆ ಜಮೀನುಗಳಿಗೆ ಹೇಗೆ ಹೋಗಬೇಕು, ಹೇಗೆ ಬಿತ್ತನೆ ಮಾಡಬೇಕು ಎಂಬುದೇ ಚಿಂತೆಯಾಗುತ್ತದೆ. ಈ ಬಾರಿ ಕೂಡ ಬೈಲಹೊಂಗಲ ಮತಕ್ಷೇತ್ರದ ಮಾಟೊಳ್ಳಿ ಗ್ರಾಮದ ರೈತರು ಹೊಲಕ್ಕೆ ಹೋಗುವ ದಾರಿ ಇಲ್ಲದೇ ಪರದಾಡುವಂತಾಗಿದೆ.
ಗ್ರಾಮದ ಅಂಗಡಿ ಅವರ ಹೊಲದಿಂದ ಗುಡಿ ಅವರ ಹೊಲದವರೆಗೆ ಈ ಭಾಗದ ರೈತರ ಹೊಲಗಳಿಗೆ ಹೋಗುವ ರಸ್ತೆ ತೀರ ಹದಗೆಟ್ಟಿದ್ದು, ರೈತರ ಗೋಳು ಕೇಳುವರು ಯಾರು ಎಂಬತಾಗಿದೆ.
ಮಳೆ ಆಗಿದ್ದರಿಂದ ಗ್ರಾಮದ ರೈತರ ಜಮೀನುಗಳಿಗೆ ಹೋಗಿ ಬರುವ ರಸ್ತೆ ಮತ್ತಷ್ಟು ಹದಗೆಟ್ಟಿದೆ. ರೈತರು ಕೃಷಿ ಪರಿಕರ, ದವಸ, ಧಾನ್ಯ, ಫಸಲು, ತರಕಾರಿ ತರಲು ಈ ರಸ್ತೆಯಲ್ಲಿ ಹರಸಾಹಸ ಪಡಬೇಕಾಗಿದೆ. ಈ ರಸ್ತೆಯ ಅವ್ಯವಸ್ಥೆ ಕುರಿತು ಮತ್ತು ರಸ್ತೆಯನ್ನು ಸುಧಾರಿಸಲು ಸಂಬಂಧಿಸಿದ ಶಾಸಕರಿಗೆ, ಅಧಿಕಾರಿಗಳಿಗೆ ಲೋಕಸಭೆ ಚುನಾವಣೆ ಪೂರ್ವದಲ್ಲಿ ಮನವಿ ಪತ್ರದ ಮೂಲಕ ವಿನಂತಿ ಮಾಡಲಾಗಿತ್ತು. ಆದರೆ ಯಾರೊಬ್ಬರು ಗಮನ ಕೊಟ್ಟಿಲ್ಲ ಎಂದು ಮ್ಯಾಟೊಳ್ಳಿ ಹಾಗೂ ಸುತ್ತಮುತ್ತಲಿನ ರೈತರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.