ಕಲಬುರಗಿ, ಜೂನ್ 09: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ‘ಅಮೋಘವರ್ಷ’ ಹೆಸರಿನ ಐಷಾರಾಮಿ ಹವಾನಿಯಂತ್ರಣ ರಹಿತ ಬಸ್ ಸೇವೆಗೆ ಚಾಲನೆ ನೀಡಿದೆ. ಈ ಬಸ್ ಕಲಬುರಗಿ, ಪಣಜಿ ನಡುವೆ ವಯಾ ಬೆಳಗಾವಿ ಸಂಚಾರ ನಡೆಸಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಕೆಆರ್‌ಟಿಸಿಯ ‘ಅಮೋಘವರ್ಷ’ ಹೆಸರಿನ ಐಷಾರಾಮಿ ಹವಾನಿಯಂತ್ರಣ ಸಹಿತ ಮತ್ತು ಹವಾನಿಯಂತ್ರಣ ರಹಿತ ಬಸ್‌ಗಳಿಗೆ 2023ರ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಿದ್ದರು.
ವಿವಿಧ ಮಾರ್ಗದಲ್ಲಿ ಈ ಮಾದರಿಯ ಬಸ್‌ಗಳು ಸಂಚಾರ ನಡೆಸುತ್ತಿವೆ.
ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥ ‘ಕವಿರಾಜ ಮಾರ್ಗ’ ಕೃತಿ ರಚಿಸಿದ ಕವಿ ಅಮೋಘವರ್ಷ ಹೆಸರಿನ ಈ ಬಸ್ ಕೆಕೆಆರ್‌ಟಿಸಿಯ ಐಷಾರಾಮಿ ಬಸ್‌ಗಳಲ್ಲಿ ಒಂದಾಗಿದೆ. ಸಂಸ್ಥೆಯು ‘ಅಮೋಘವರ್ಷ’ ಬ್ರಾಂಡ್‌ನ 36 (ನಾನ್ ಎಸಿ) ಸ್ಲೀಪರ್ ಹಾಗೂ 4 (ಎಸಿ) ಸ್ಲೀಪರ್ ಬಸ್ ಸೇವೆಗಳನ್ನು ಹೊಂದಿದೆ.
ಬಸ್ ವೇಳಾಪಟ್ಟಿ: ‘ಅಮೋಘವರ್ಷ’ ನಾನ್ ಎಸಿ ಸ್ಲೀಪರ್ ಬಸ್ ಪ್ರತಿದಿನ ಬೆಳಗಾವಿಯಿಂದ ರಾತ್ರಿ 10.35ಕ್ಕೆ ಹೊರಡಲಿದೆ. ಮರುದಿನ ಬೆಳಗ್ಗೆ 6 ಗಂಟೆಗೆ ಕಲಬುರಗಿ ತಲುಪಲಿದೆ. ನಡುವೆ ಈ ಬಸ್ ಯರಗಟ್ಟಿ, ಜೇವರ್ಗಿ ಮಾರ್ಗವಾಗಿ ಸಂಚಾರ ನಡೆಸುತ್ತದೆ. ಕಲಬುರಗಿಯಿಂದ ಸಂಜೆ 6 ಗಂಟೆಗೆ ಹೊರಡುವ ಬಸ್, ಬೆಳಗಾವಿಗೆ ಮರುದಿನ ಮುಂಜಾನೆ 2.35ಕ್ಕೆ ಆಗಮಿಸುತ್ತದೆ.
ಕಲಬುರಗಿ-ಪಣಜಿ ವಯಾ ಬೆಳಗಾವಿ ಬಸ್ ಪಣಜಿ ಬಸ್ ನಿಲ್ದಾಣದಿಂದ 18:00, ಪೊಂಡಾ ಬಸ್ ನಿಲ್ದಾಣದಿಂದ 19:00, ಖಾನಾಪುರದಿಂದ 21:20, ಬೆಳಗಾವಿ 22.35, ಯರಗಟ್ಟಿ 23:05, ಲೋಕಾಪುರದಿಂದ 23:55, ಬಾಗಲಕೋಟೆಯಿಂದ 00:55, ಮುದ್ದೇಬಿಹಾಳದಿಂದ 02:30, ದೇವರಹಿಪ್ಪರಗಿಯಿಂದ 03:10, ಸಿಂಧಗಿ 04:15 ಮತ್ತು ಕಲಬುರಗಿ 06:00ಕ್ಕೆ ಹೊರಡಲಿದೆ.
ಕೆಕೆಆರ್‌ಟಿಸಿಯ ‘ಅಮೋಘವರ್ಷ’ ಬ್ರಾಂಡ್‌ನ ಬಸ್‌ಗಳು 30 ಆಸನಗಳ ಸಾಮರ್ಥ್ಯ ಹೊಂದಿವೆ. ಈ ಬಸ್ ಸ್ವಯಂ ಚಾಲಿತ ಅಗ್ನಿ ನಂದಕ ಉಪಕರಣ, ಪ್ರತಿ ಸೀಟಿಗೆ ಕಿರು ಲಗೇಜ್, ಮೊಬೈಲ್/ ಲ್ಯಾಪ್ ಟಾಪ್ ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲ್ಯಾಂಪ್ ವ್ಯವಸ್ಥೆಯನ್ನು ಹೊಂದಿವೆ.
ಅತ್ಯಾಧುನಿಕವಾದ ವಿನ್ಯಾಸಗಳನ್ನು ಈ ಬಸ್ ಒಳಗೊಂಡಿವೆ. ಏರ್ ಸಸ್ಪೆಕ್ಷನ್ ಸಿಸ್ಟಮ್, ಪಬ್ಲಿಕ್ ಇನ್‍ಫಾರ್ಮೇಷನ್ ಸಿಸ್ಟಂ, ರಿವರ್ಸ್ ಪಾರ್ಕಿಂಗ್ ಅಲಾರ್ಮ್ ಸೌಲಭ್ಯಗಳನ್ನು ಬಸ್ ಒಳಗೊಂಡಿದೆ.
2023ರ ಆಗಸ್ಟ್‌ನಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ‘ಕಲ್ಯಾಣ ರಥ’ ಹೆಸರಿನ ಐಷರಾಮಿ ವೋಲ್ವೋ ಮಲ್ಟಿ ಆಕ್ಸೆಲ್ ಸ್ಲೀಪರ್ ಬಸ್ ಸೇವೆ ಆರಂಭಿಸಿತ್ತು. ಅಮೋಘವರ್ಷ ಸಹ ಸಂಸ್ಥೆಯ ಐಷಾರಾಮಿ ಬಸ್‌ಗಳಲ್ಲಿ ಒಂದು.