ವಿಜಯಪುರ: ಭಾರಿ ಆರ್ಭಟದೊಂದಿಗೆ ಜಿಲ್ಲೆಯನ್ನು ಪ್ರವೇಶಿಸಿರುವ ಮೃಗಶಿರ ಮಳೆ ಶನಿವಾರವೂ ಮುಂದುವರೆದಿದೆ. ನಿನ್ನೆ 32.7 ಮಿ.ಮೀ. ಮಳೆಯಾಗಿದ್ದರೆ, ಇಂದು 12.16 ಮಿ.ಮೀ. ಮಳೆಯಾಗಿದೆ. ಸಿಡಿಲಿಗೆ ಎಮ್ಮೆಗಳು ಬಲಿಯಾಗಿದ್ದರೆ, ಭಾರಿ ಮಳೆಗೆ ಹತ್ತಾರು ಮನೆಗಳು ನೆಲಕ್ಕೆ ಉರುಳಿವೆ.
ಡೋಣಿ ನದಿ ಸೇರಿದಂತೆ ಹಳ್ಳಗಳು ಮೈದುಂಬಿ ಹರಿಯುತ್ತಿವೆ.
ಅಬ್ಬರದ ಮಳೆಗೆ ಚಡಚಣದಲ್ಲಿ ಶನಿವಾರ ಸಂಜೆ ಬಡಿದ ಸಿಡಿಲಿಗೆ ದುಂಡಪ್ಪ ನಿರಾಳೆ ಎಂಬವರಿಗೆ ಸೇರಿದ ಎಮ್ಮೆ ಸಾವಿಗೀಡಾಗಿದ್ದು, ಪಕ್ಕದಲ್ಲಿದ್ದ ಮೇವಿನ ಬಣವೆಗೂ ಬಂಎಕಿ ಹೊತ್ತಿಕೊಂಡಿದೆ. ಚಡಚಣ ಭಾಗದಲ್ಲೇವಿಠ್ಠಲ ಅಗಸರ ಎಂಬವರಿಗೆ ಸೇರಿದ ಎಮ್ಮೆ ಸಿಡಿಲು ಬಡಿದು ಸಾವಿಗೀಡಾಗಿದೆ.
ಆಲಮೇಲ ತಾಲೂಕಿನ ಕುಮಸಗಿ ಗ್ರಾಮದಲ್ಲಿ ಶರಣಪ್ಪ ಯಂಕಂಚಿ ಎಂಬವರಿಗೆ ಸೇರಿದ ಕುರಿ ಬಲಿಯಾಗಿದೆ. ಜಿಲ್ಲೆ ಗ್ರಾಮೀಣ ಭಾಗದಲ್ಲಿ ಮಳೆಯಿಂದಾಗಿ ಜನ ವಸತಿಯ ಮಣ್ಣಿನ ಕಟ್ಟಡಗಳು ಬೀಳು ಆರಂಭಿಸಿವೆ.
ವಿಜಯಪುರ ಒಂದೇ ಭಾಗದಲ್ಲಿ 8 ಕ್ಕೂ ಹೆಚ್ಚು ಮನೆಗಳು ಮಳೆಯಿಂದಾಗಿ ನೆಲಕ್ಕುರುಳಿವೆ. ಬಸವನಬಾಗೇವಡಿ ತಾಲೂಕಿನ ಯರನಾಳ ಗ್ರಾಮದಲ್ಲಿ ಸಿದ್ದವ್ವ ವಾಲೀಕಾರ ಹಾಗೂ ತಂಗೆವ್ವ ಒಂಟಗುಡಿ ಎಂಬವ ಮನೆಗಳು ಮೇಲ್ಛಾವಣಿ, ಗೋಡೆಗಳು ಬಿದ್ದು ಮನೆಗಳು ಹಾನಿಯಾಗಿವೆ.
ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ವರೆಗೆ ಜಿಲ್ಲೆಯಾದ್ಯಂತ 32.7 ಮಿ.ಮೀ. ಮಳೆಯಾಗಿದ್ದರೆ, ಶನಿವಾರ ಬೆಳಗಿನ ವರೆಗೆ ಕಳೆದ 24 ಗಂಟೆಯಲ್ಲಿ ಮತ್ತೆ 12.6 ಮಿ.ಮೀ. ಮಳೆಯಾಗಿದ್ದು, ಸಂಜೆಯ ವರೆಗೂ ಜಿಲ್ಲೆಯ ಹಲವು ಕಡೆಗಳಲ್ಲಿ ಅಲ್ಲಲ್ಲಿ ಮತ್ತೆ ಮಳೆ ಸುರಿದಿದೆ.
ಶನಿವಾರ ಬೆಳಗಿನ ವರೆಗಿನ 24 ಗಂಟೆ ಅವಧಿಯಲ್ಲಿ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ 85 ಮಿ.ಮೀ. ಮಳೆಯಾಗಿದ್ದರೆ, ಕೊಲ್ಹಾರ ತಾಲೂಕಿಕ ಕೂಡಗಿ ಭಾಗದಲ್ಲಿ 70.5 ಮಿ.ಮೀ. ಮಳೆಯಾಗಿದೆ. ಬಬಲೇಶ್ವರ ತಾಲೂಕಿನ ಅರ್ಜುಣಗಿ ಭಾಗದಲ್ಲಿ 61.5 ಮಿ.ಮೀ. ಮಳೆಯಾಗಿದ್ದರೆ, ಸಿಂದಗಿ ತಾಲೂಕಿನ ಗುಬ್ಬೇವಾಡ ಪರಿಸರದಲ್ಲಿ 56.5 ಮಿ.ಮೀ. ಮಳೆ ಸುರಿದಿದೆ.