ಬೆಂಗಳೂರು: ಲೋಕಸಭೆಗೆ ಮೂವರು ಶಾಸಕರು ಹಾಗೂ ವಿಧಾನ ಪರಿಷತ್ತಿನಿಂದ ಒಬ್ಬರು ಆಯ್ಕೆಯಾಗಿರುವುದರಿಂದ ಅವರ ಸ್ಥಾನಗಳಿಗೆ 6 ತಿಂಗಳ ಒಳಗೆ ಉಪ ಚುನಾವಣೆ ಘೋಷಣೆಯಾಗಲಿದ್ದು, ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಮಧ್ಯೆ ಮತ್ತೊಂದು ಸುತ್ತಿನ ಜಿದ್ದಾಜಿದ್ದಿ ಹೋರಾಟ ನಡೆಯುವುದು ಗ್ಯಾರಂಟಿಯಾಗಿದೆ.
ಚನ್ನಪಟ್ಟಣ ಶಾಸಕರಾಗಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ, ಶಿಗ್ಗಾವಿ ಶಾಸಕರಾಗಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ, ಸಂಡೂರು ಶಾಸಕ ತುಕಾರಾಂ ಅವರು ಬಳ್ಳಾರಿ ಹಾಗೂ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ತಿನ ಸದಸ್ಯ ಶ್ರೀನಿವಾಸ ಪೂಜಾರಿ ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಿಂದ ಆಯ್ಕೆಯಾಗಿರುವುದರಿಂದ ಅವರು ಸದ್ಯ ಪ್ರತಿನಿಧಿಸುತ್ತಿರುವ ಶಾಸಕ ಹಾಗೂ ವಿಧಾನ ಪರಿಷತ್ತಿನ ಸ್ಥಾನಗಳಿಗೆ ಶೀಘ್ರವೇ ರಾಜೀನಾಮೆ ಸಲ್ಲಿಸಲಿದ್ದಾರೆ. ಇವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆಯಾಗಲಿದೆ.