ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಆಗಿರುವ ಹಗರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ (Minister Nagendra) ರಾಜೀನಾಮೆ ನಾವು ಕೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ ಆಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಹಾಲಿ ಸಚಿವ ನಾಗೇಂದ್ರ ಬೆದರಿಕೆಯೊಡ್ಡಿದ್ದಾರೆ ಎಂಬ ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಯಾವ ಬೆದರಿಕೆನೂ ಇಲ್ಲ, ನಾಗೇಂದ್ರ ರಾಜೀನಾಮೆ ನಾವು ಕೇಳಿಲ್ಲ.
ಎಸ್‌ಐಟಿ ವರದಿ ಇನ್ನೂ ಬಂದಿಲ್ಲ. ಎಸ್‌ಐಟಿ ರಚನೆ ಮೊನ್ನೆ ಆಗಿರುವುದಲ್ವೇನ್ರಿ ? ಅವರು ಇನ್ನೂ ವರದಿ ಕೊಟ್ಟಿಲ್ಲ. ನಾನು ನಾಗೇಂದ್ರ ಅವರ ಬಳಿಯಿಂದ ವಿವರಣೆ ಕೇಳಿಲ್ಲ ಎಂದರು.
ಇನ್ನು ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಸುದ್ದಿಗಾರರ ಜೊತೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಏಳು ಜನರು ನಮ್ಮ ಪಕ್ಷದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಮ್ಮ ಸಂಖ್ಯಾ ಬಲದಲ್ಲಿ ಏಳು ಸ್ಥಾನ ಸಿಗುತ್ತೆ. 19-20 ಮತಗಳು ಬೇಕಾಗುತ್ತವೆ. ಜೆಡಿಎಸ್ ಕೂಡ ಒಬ್ಬ ಅಭ್ಯರ್ಥಿ ಹಾಕಿದ್ದಾರೆ. 11ಕ್ಕಿಂತ ಜಾಸ್ತಿ ನಾಮಪತ್ರ ಆದ್ರೆ ಚುನಾವಣೆ ಆಗುತ್ತೆ, ಇನ್ನೊಂದು ಅಭ್ಯರ್ಥಿ ಹಾಕಲು ಅವಕಾಶ ಇರಲಿಲ್ಲ ಎಂದು ಹೇಳಿದರು.
ವಾಲ್ಮೀಕಿ ನಿಗಮದಲ್ಲಿ ಆಗಿರುವ ಹಗರಣದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಮೊದಲು ರಿಪೋರ್ಟ್ ಕೊಡಬೇಕಲ್ವೇನ್ರೀ? ಗಡವು ಕೊಡಲು ಬಿಜೆಪಿಗರು ಯಾರು? ವಿಪಕ್ಷ ಇರುವುದು ಹೋರಾಟ ಮಾಡಲು. ಅನ್ಯಾಯದ ವಿರುದ್ಧ ಹೋರಾಟ ಮಾಡಲು. ಅವರು ಹೋರಾಟ ಮಾಡಲಿ ಎಂದು ಹೇಳಿದರು.