ಬೆಂಗಳೂರು,ಜೂ.3- ವಿಶ್ವದ ಗಮನಸೆಳೆದಿರುವ 18ನೇ ಲೋಕಸಭೆ ಚುನಾವಣೆಯ 542 ಕ್ಷೇತ್ರಗಳ ಮತ ಎಣಿಕೆ ನಾಳೆ ಭಾರೀ ಬಿಗಿ ಭದ್ರತೆಯಲ್ಲಿ ನಡೆಯಲಿದ್ದು, ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಯಾರಿಗೆ ಎಂಬುದು ತೀರ್ಮಾನವಾಗಲಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಮತ ಎಣಿಕೆ ನಡೆದು, ಮತದಾರ ಗ್ಯಾರಂಟಿಗೋ ಇಲ್ಲವೋ ಮೋದಿ ಗ್ಯಾರಂಟಿಗೋ ಅಚ್ಚು ಒತ್ತಿದ್ದಾನೋ ಎಂಬುದು ಬಹಿರಂಗವಾಗಲಿದೆ.
ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದೆ. ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆದ ಬಳಿಕ ಇವಿಎಂಗಳ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನ 2 ಗಂಟೆ ನಂತರ ಫಲಿತಾಂಶದ ಚಿತ್ರಣ ಹೊರಬೀಳಲಿದ್ದು, ಬಹುತೇಕ ಸಂಜೆಯೊಳಗೆ ಜನಾದೇಶ ಯಾರಿಗೆ ಎಂಬುದು ಸ್ಪಷ್ಟವಾಗಲಿದೆ.
ಬಹುತೇಕ ಮತಗಟ್ಟೆ ಸಮೀಕ್ಷೆಗಳು ಈ ಬಾರಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಸ್ಥಾನಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆದ್ದು ಬಿಜೆಪಿ 3ನೇ ಬಾರಿಗೆ ಹ್ಯಾಟ್ರಿಕ್ ಜಯ ಗಳಿಸಲಿದೆ ಎಂದು ಅಂದಾಜಿಸಲಾಗಿದೆ.
ಆದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಮತಗಟ್ಟೆ ಸಮೀಕ್ಷೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಕಳೆದ 2023ರ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಎರಡಂಕಿ ದಾಟಲಿದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಿದೆ.
1999ರಿಂದ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಈವರೆಗೂ ಎರಡಂಕಿಯನ್ನು ದಾಟಿಲ್ಲ. ಈ ಬಾರಿ 20 ಕ್ಷೇತ್ರಗಳಲ್ಲಿ ಗೆದ್ದು ದಾಖಲೆ ಬರೆಯುತ್ತೇವೆ ಎಂಬ ನಿರೀಕ್ಷೆಯನ್ನು ಕೈ ನಾಯಕರು ಹೊಂದಿದ್ದಾರೆ.
ಗ್ಯಾರಂಟಿಗಳ ಅನುಷ್ಟಾನದಿಂದ ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ. ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆ, ಮನೆ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ಆರ್ಥಿಕ ನೆರವು ನೀಡುವ ಗೃಹಲಕ್ಷ್ಮಿ ಯೋಜನೆ, ಪದವಿ ಮತ್ತು ಡಿಪ್ಲೊಮೊ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ, ಅನ್ನಭಾಗ್ಯ, ಉಚಿತವಾಗಿ ವಿದ್ಯುತ್ ಪೂರೈಸುವ ಗೃಹಜ್ಯೋತಿ ಯೋಜನೆಗಳಿಂದ ಫಲಾನುಭವಿಗಳು ಸಂತುಷ್ಟರಾಗಿದ್ದಾರೆ. ಹೀಗಾಗಿ ನಮಗೆ ಹೆಚ್ಚಿನ ಸ್ಥಾನ ಬಂದೇ ಬರಲಿದೆ ಎಂಬ ಆತವಿಶ್ವಾಸದಲ್ಲಿದ್ದಾರೆ.