Breaking News

ಕಣ್ಮರೆಯಾಗುತ್ತಿರುವ ಉತ್ತರಕರ್ನಾಟಕ ಅಡುಗೆಗಳು

Spread the love

ಕಾಲಕ್ರಮೇಣ ಬದಲಾವಣೆ ಸಹಜ ಕ್ರಿಯೆ. ಆದರೆ ಸಾಂಪ್ರದಾಯಿಕ ಮತ್ತು ಪಾರಂಪರಿಕ ಅಡುಗೆ ತೊಡುಗೆ ವಿಷಯದಲ್ಲಿ ಬದಲಾವಣೆ ಇತ್ತೀಚಿನ ದಿನಗಳಲ್ಲಿ ತುಸು ಜಾಸ್ತಿ ಆಗುತ್ತಿದೆ ಅಂದರೆ ಎಲ್ಲರೂ ತಲೆದೂಗಬೇಕು.Uttar Karnataka cuisines: ಕಣ್ಮರೆಯಾಗುತ್ತಿರುವ ಉತ್ತರಕರ್ನಾಟಕ ಅಡುಗೆಗಳು

ಕರ್ನಾಟಕದ ವಿಷಯದಲ್ಲಿ ಪ್ರತಿ ಜಿಲ್ಲೆಗಳಿಗೂ ಅದರದ್ದೆ ಆದ ವಿಶೇಷತೆ ಇದೆ.

ಅದು ಭಾಷೆ ಆಗಲಿ ಊಟ ಆಗಲಿ ಸಾಂಸ್ಕತಿಕ ವಿಚಾರವಾಗಲಿ ಕರ್ನಾಟಕ ಹೆಸರುವಾಸಿ. ಅದರಲ್ಲೂ ಉತ್ತರ ಕರ್ನಾಟಕ ತನ್ನ ಭಾಷೆಗಾಗಿ, ಅಡುಗೆಗಾಗಿ ಹೆಸರುವಾಸಿ. ದಕ್ಷಿಣ ಕರ್ನಾಟಕದ ಪ್ರತಿಯೊಬ್ಬರು ಉತ್ತರ ಕರ್ನಾಟಕದ ಹೆಸರು ಕೇಳಿದ ತಕ್ಷಣ ಕೇಳ್ಳೋದೆ “ನಿಮ್ಮಲ್ಲಿ ರೊಟ್ಟಿ ಊಟ ಫೇಮಸ್‌ ಅಲ್ವಾ” ಎಂಬ ಮಾತು. ಇಂದು ಆ ಮಾತು ನಿಜವಾಗಿಯೂ ಅಸ್ತಿತ್ವದಲ್ಲಿ ಇದಿಯೇ ?? ಪ್ರಶ್ನೆಗೆ ಸಮಂಜಸವಾದ ಉತ್ತರ ಇಲ್ಲ.

ಜೋಳದ ರೊಟ್ಟಿ, ಜೋಳದ ಹಿಟ್ಟನ್ನು ಬಿಸಿ ನೀರಿನಲ್ಲಿ ಹಾಕಿ ಮುದ್ದೆ ತರಹ ಮಿಶ್ರಣ ಮಾಡಿ ಅದನ್ನು ಹದವಾಗಿ ನಾದಿ ಕಲ್ಲಿನ ಕಾವಲಗಿಯಲ್ಲಿ ಬಡಿದು ತಟ್ಟಿ ಸೌದೆ ಒಲೆಯ ಹಂಚಿನ ಮೇಲೆ ಹಾಕಿ ಬೇಯಿಸಬೇಕು ಆದರೆ ಇಂದು ಸೌದೆ ಒಲೆಯೂ ಇಲ್ಲ, ತಟ್ಟುವುದು ಇಲ್ಲ. ಎಂಥಹ ಕಾಲ ಬಂದಿದೆ ಅಂದರೆ ರೊಟ್ಟಿಯನ್ನು ತಟ್ಟದೆ ಚಪಾತಿ ತರಹ ಲಟ್ಟಿಸುವುದು ಶುರುವಾಗಿದೆ. ಇನ್ನೂ ರೊಟ್ಟಿಯಲ್ಲಿಯೇ ನಾನಾತರಹದ ಬಗೆ ಬಗೆಯ ರೊಟ್ಟಿಗಳಾದ ಸಜ್ಜೆ ರೊಟ್ಟಿ, ಎಳ್ಳು ರೊಟ್ಟಿ, ರಾಗಿ ರೊಟ್ಟಿ ಹೀಗೆ ವಿಧ ವಿಧವಾದ ತರಹಗಳ ಪ್ರಕಾರಗಳು ಈಗ ಹಬ್ಬ ಹರಿದಿನಕ್ಕೆ ಸೀಮಿತವಾಗಿವೆ.

ಮುಟುಗಿ ಎಂಬ ಖ್ಯಾದ ಬಿಸಿ ರೊಟ್ಟಿಯಿಂದ ಮಾಡುತ್ತಿದ್ದರು ಎಂಬುದು ಇತ್ತೀಚಿನ ಜನರಿಗೆ ಮರೆತು ಹೋಗಿರುವುದು ವಿಪರ್ಯಾಸ. ಜಿಗಟಿನ ರೊಟ್ಟಿ ಬಡಿದು ಅದನ್ನು ಕಲ್ಲಿನ ಒಲ್ಲಲ್ಲಿ ತುಪ್ಪ ಜೀರಿಗೆ ಬೆಳ್ಳುಳ್ಳಿ ಮತ್ತು ಖಾರದೊಡನೆ ಜಜ್ಜಿ ಅರೆದು ಉಂಡೆ ತರಹ ಮಾಡಿ ತಿಂದರೆ ಆಹಾ ಸ್ವರ್ಗಕ್ಕೆ ಮೂರೇ ಗೈಣು ಎಂಬಂತೆ ಅದರ ರುಚಿ. ಅದರ ಸ್ವಾದ ಬಲ್ಲವನೇ ಹೇಳಬಲ್ಲ.

ಕಣ್ಮರೆಯಾಗುತ್ತಿರುವ ನಮ್ಮ ಭಾಗದ ಇನ್ನೊಂದು ಖ್ಯಾದ ಬೆಲ್ಲದ ಹಲ್ಪಿ. ಪುಠಾಣಿ ಹಿಟ್ಟನ್ನು ಎರಡು ಎಳೆ ಆನಕ್ಕೆ ಬಂದ ಬೆಲ್ಲದಲ್ಲಿ ಹದವಾಗಿ ಸೇರಿಸಿ ಒಂದು ಪರಾತಕ್ಕೆ ತುಪ್ಪ ಸವರಿ ಅದರಲ್ಲಿ ಹಾಕಿ ಮೇಲೆ ಒಣ ಕೊಬ್ಬರಿ ಮತ್ತು ಪುಠಾಣಿ ಹಾಕಿ ವಜ್ರದ ಆಕಾರದಲ್ಲಿ ಕತ್ತರಿಸಿ ತಿಂದರೆ ಇತ್ತೀಚಿನ ಖಾಜು ಕಟಿÉಕ್ಕಿಂತ ಅದ್ಭುತವದು. ಆಧುನಿಕತೆಗೆ ತಕ್ಕಂತೆ ಬದಲಾಗುವುದು ಸರಿ ಆದರೆ ನಮ್ಮ ಭಾಗದ ತಿಂಡಿ, ತಿನಿಸು ಊಟಗಳನ್ನು ಮರೆಯುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಾಗಿದೆ.

ಚುಮ್ಮರಿ ಉಂಡಿ ಜನರ ಬದುಕಿನಲ್ಲಿ ಮರೆಯಾಗಿ ಹೋಗಿದೆ. ಕಲ್ಲಿನಲ್ಲಿ ಅರೆದ ಖಾರದ ಹಿಂಡಿ ಬಿಸಿ ಬಿಸಿ ಜೋಳದ ರೊಟ್ಟಿ ಈಗ ಕನಸಾಗಿದೆ. ಸಂಗಟಿ ಸಾರು, ನುಚ್ಚು ಮಜ್ಜಿಗೆ ಮೇಲೆ ಸಣ್ಣದಾಗಿ ಹೆಚ್ಚಿದ ಉಳ್ಳಾಗಡ್ಡಿ ಯಾರಿಗೂ ನೆನಪಿಲ್ಲ. ಹುಣಸೆಯ ಪದಾರ್ಥ ಹುಂಚಿ ಜಿಗಳಿ ಅಂಗಡಿಯಲ್ಲಿ ಸಿಗುವ ಮಟ್ಟಿಗೆ ಕಾಲ ಬದಲಾಗಿದೆ. ಅಕ್ಕಿ ಹುಗ್ಗಿ, ಸಾಮೆ ಅಕ್ಕಿ ಅಣ್ಣ, ಬದನೆಕಾಯಿ ಎಣೆಗಾಯಿ, ತಾಲಿಪಟ್ಟು, ರಾತ್ರಿ ಉಳಿದ ಅನ್ನಕ್ಕೆ ಒಗ್ಗರಣೆ ಅದರ ಜೊತೆ ಚುಮ್ಮರಿ, ಎಣ್ಣಿ ಹೋಳಿಗೆ, ಸೌತಿಬೀಜ ಹುಗ್ಗಿ ಹೀಗೆ ಇನ್ನೂ ಅನೇಕ ಅಡುಗೆ ಪದಾರ್ಥಗಳು ಗಣನೀಯವಾಗಿ ಕಡಿಮೆಯಾಗುತ್ತಿರುವುದು ಖೇದಕರ ವಿಷಯ.

ದೋಸೆ, ಇಡ್ಲಿ, ಪುರಿ ಹೀಗೆ ಸಾಗುತ್ತಾ ನಾರ್ಥ ಇಂಡಿಯನ್‌, ಸೌತ್‌ ಇಂಡಿಯನ್‌ ಊಟಕ್ಕೆ ಮೊರೆ ಹೋಗುತ್ತಾ ನಮ್ಮ ಗ್ರಾಮೀಣ ಸೊಗಡಿನ, ನಮ್ಮ ನೆಲದ ಪಾರಂಪರಿಕ ಊಟದ ಪದ್ಧತಿ ಮರೆತು ಬಾಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ನೀವೆ ಅವಲೋಕಿಸಿಕೊಳ್ಳಿ.

ಕಡಕ್‌ ರೊಟ್ಟಿಯ ಮೇಲೆ ಕೆನೆ ಮೊಸರು, ಶೇಂಗಾ ಚಟ್ನಿ ಹಾಕಿ ತಿಂದರೆ ಯಾವುದೇ ಪಿಜ್ಜಾಗೂ ಕಡಿಮೆ ಇಲ್ಲ ಎಂಬುದು ಗೊತ್ತಿದ್ದರು ಪಿಜ್ಜಾ ಎಂಬ ಆಧುನಿಕತೆಯ ಭೂತದ ಹಿಂದೆ ಬಿದ್ದಿರುವ ನಮಗೆ ಅರಿವು ಯಾವಾಗ ಆಗುತ್ತದೆ ಎಂಬುದು ನಿಗೂಢ. ಸಮಯವಿದ್ದರೆ ಸುಮ್ಮನೆ ನೆನಪಿಸಿಕೊಳ್ಳಿ ನಮ್ಮ ಊರಿನ ನಮ್ಮ ಭಾಗದ ಯಾವ ಸಾಂಪ್ರದಾಯಿಕ ಊಟ ಇಂದು ಕಣ್ಮರೆಯಾಗುತಿದೆ ? ಮುಂದಿನ ಪೀಳಿಗೆಗೆ ಅದರ ರುಚಿಯನ್ನು ಸವಿಸಬೇಕಾಗಿರುವುದು ನಮ್ಮ ಕರ್ತವ್ಯ ಎನಿಸಿದರೆ ಇಂದೆ ಅಂತಹ ಊಟವನ್ನು ಮರಳಿ ಮಾಡುವ ಪ್ರಯತ್ನ ಮಾಡುವುದು ಒಳಿತಲ್ಲವೆ ? ಏಕೆಂದರೆ ಪ್ರಯತ್ನವೆಂಬುದು ಉಚಿತ.

-ಗಿರಿಧರ ಹಿರೇಮಠ

ಹುಬ್ಬಳ್ಳಿ


Spread the love

About Laxminews 24x7

Check Also

DCM ಡಿ.ಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ : ಸುಪ್ರೀಂಕೋರ್ಟ್’ಗೆ ಅರ್ಜಿ ಸಲ್ಲಿಸಿದ CBI

Spread the love ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ