ಕಾರ್ಕಳ:/ಅಜೆಕಾರು: ಮೀನು ಹಿಡಿಯಲು ತೆರಳಿದ್ದ ಒಂದೆ ಕುಟುಂಬದ ಇಬ್ಬರು ಸದಸ್ಯರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುದೆಲ್ಕಡಿ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ದರ್ಖಾಸು ನಿವಾಸಿ ವಿವಾಹಿತ ಹರೀಶ್ ಪೂಜಾರಿ( 43) ಮತ್ತು ಸಹೋದರಿ ಮಗ ಕೆರ್ವಾಶೆಯ ಪಾಚಾರಬೆಟ್ಟು ನಿವಾಸಿ ಬಾಲಕ ರಿತೇಶ್(17) ಮೃತ ದುರ್ದೈವಿಗಳು.
ಶಿರ್ಲಾಲುವಿನ ಮೂಡಯಿಗುಡ್ಡೆ ದರ್ಖಾಸು ನಿವಾಸಿ, ಸೇತು ಪೂಜಾರಿ ಕಮಲ ದಂಪತಿಗಳ ಪುತ್ರರಾಗಿರುವ ಹರೀಶ್ ಪೂಜಾರಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. ಬೇಸಗೆ ರಜೆ ಹಿನ್ನಲೆಯಲ್ಲಿ ಅಜ್ಜಿ ಮನೆಗೆ ಕೆರ್ವಾಶೆಯ ಶೆಟ್ಟಿಬೆಟ್ಟು ಪಾಚಾರ ಬೆಟ್ಟುವಿನಿಂದ ಅಕ್ಕನ ಮಗ ರಿತೇಶ್ ತನ್ನ ತಂದೆ- ತಾಯಿ, ಸಹೋದರಿ ಜತೆ ಶನಿವಾರ ಬಂದಿದ್ದರು.
ಹರೀಶ್ ಪೂಜಾರಿ ಮತ್ತು ರಿತೇಶ್ ಬಲೆ ಹಾಕಿ ಮೀನು ಹಿಡಿಯಲೆಂದು ಉಬ್ರೇಲು ಗುಂಡಿ ಕೆರೆಗೆ ತೆರಳಿದ್ದರು. ಮೀನು ಹಿಡಿಯಲೆಂದು ನೀರಿಗೆ ಇಳಿದಿದ್ದ ವೇಳೆ ರಿತೇಶ್ ಕಾಲು ಕೆಸರಿನಲ್ಲಿ ಸಿಲುಕಿಕೊಂಡು ಮುಳುಗಿದ್ದಾನೆ. ಆತನ ರಕ್ಷಣೆಗೆಂದು ತೆರಳಿದ ಮಾವ ಹರೀಶ್ ಪೂಜಾರಿ ಕೂಡ ಕೆಸರು ನೀರಿನಲ್ಲಿ ಸಿಲುಕಿಕೊಂಡು ಮುಳುಗಿ ಮೃತಪಟ್ಟರು.ಘಟನೆ ಮನೆಯ ಪಕ್ಕದಲ್ಲೆ ನಡೆದಿದೆ.