ಬೆಳಗಾವಿ, : ವೃದ್ಧ ರೈತರೊಬ್ಬರು ಮೊಸಳೆ ದಾಳಿಗೆ ಬಲಿಯಾದ ದಾರುಣ ಘಟನೆ ಚಿಕ್ಕೋಡಿ (Chikkodi) ತಾಲೂಕಿನ ದತ್ತವಾಡ-ಸದಲಗಾ ಬಳಿಯ ದೂದ್ಗಂಗಾ ನದಿ (Doodhganga river) ದಡದಲ್ಲಿ ಸಂಭವಿಸಿದೆ. ಮೃತರನ್ನು ಚಿಕ್ಕೋಡಿ ತಾಲೂಕಿನ ಸದಲಗಾ (Sadalga) ಗ್ರಾಮದ ನಿವಾಸಿ ಮಹಾದೇವ ಪುನ್ನಪ್ಪ ಖುರೆ (72) ಎಂದು ಗುರುತಿಸಲಾಗಿದೆ.
ಶುಕ್ರವಾರ (ಮೇ 10ರಂದು) ಮಹಾದೇವ ಖುರೆ ನದಿ ತೀರದ ಪ್ರದೇಶದಲ್ಲಿನ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು. ಕೃಷಿ ಕೆಲಸ ಮುಗಿಸಿ ಸ್ನಾನ ಮಾಡಲು ನದಿಗೆ ತೆರಳಿದ್ದರು. ನದಿಯಲ್ಲಿ ಕೆಲಹೊತ್ತು ಈಜಿಕೊಂಡು ಮರಳಿ ನದಿಯ ದಡಕ್ಕೆ ಬರುತ್ತಿದ್ದಾಗ ಮೊಸಳೆ ಕಾಲು ಹಿಡಿದು ನೀರಿನೊಳಗೆ ಎಳೆದೊಯ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ರೈತ ಮಹದೇವರ ಎಡತೊಡೆಯ ಮೇಲೆ ಗಾಯದ ಗುರುತು ಇತ್ತು. ಶನಿವಾರ ರಮೇಶ ಪ್ರಧಾನ ಎಂಬುವವರ ಜಮೀನಿನ ಬಳಿಯ ನದಿ ದಂಡೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಶವವನ್ನು ಸಾಮಾಜಿಕ ಕಾರ್ಯಕರ್ತ ಸುಕುಮಾರ್ ಉಗಾರೆ ಮತ್ತು ಇತರ ಗ್ರಾಮಸ್ಥರು ನದಿ ದಡದಿಂದ ಹೊರತೆಗೆದಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.