ಒಂದು ಮತ; ಐದು ವರ್ಷ ಪುಕ್ಕಟೆ ಕೆಲಸ- ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ

Spread the love

ವಿಜಯಪುರ: ರಾಜ್ಯ ರಾಜಕೀಯದಲ್ಲಿ ‘ಅಜಾತ ಶತ್ರು’ ಎಂದೇ ಗುರುತಿಸಿಕೊಂಡಿರುವ ದಲಿತ ನಾಯಕ, ಬಿಜೆಪಿ ಲೋಕಸಭೆ ಅಭ್ಯರ್ಥಿ ರಮೇಶ ಜಿಗಜಿಣಗಿ ಏಳನೇ ಬಾರಿಗೆ ಸಂಸತ್‌ ಭವನ ಪ್ರವೇಶಿಸಲು ತುದಿಗಾಲ ಮೇಲೆ ನಿಂತಿದ್ದಾರೆ.

ರಾಜ್ಯ ಮಾತ್ರವಲ್ಲದೇ, ರಾಷ್ಟ್ರ ರಾಜಕಾರಣದಲ್ಲೂ ಛಾಪು ಮೂಡಿಸಿರುವ ರಮೇಶ ಜಿಗಜಿಣಗಿ ಅವರು ಈ ಬಾರಿ ಗೆಲುವು ದಾಖಲಿಸಿದರೆ ಬಹುತೇಕ ಹೊಸ ಇತಿಹಾಸ ನಿರ್ಮಾಣವಾಗಲಿದೆ.ತಮ್ಮ ಸರಳ, ಸಜ್ಜನಿಕೆ, ಮೃದುಭಾಷೆ, ಹಮ್ಮು,ಬಿಮ್ಮು, ಗತ್ತು, ಗೈರತ್ತು ಇಲ್ಲದ ನಡೆಯಿಂದಲೇ ಜನರನ್ನು ಸೆಳೆಯುವ ಹಾಗೂ ಎಲ್ಲ ಸಮಾಜದವನರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ನಾಯಕರಾಗಿದ್ದಾರೆ. ಮೂರು ಬಾರಿ ಶಾಸಕರಾಗಿ, ಸಚಿವರಾಗಿ, ಚಿಕ್ಕೋಡಿಯಿಂದ ಮೂರು, ವಿಜಯಪುರದಿಂದ ಮೂರು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಅಘಾದ ಅನುಭವ ಹೊಂದಿರುವ ನಾಯಕರಾಗಿದ್ದಾರೆ. ಅವರೊಂದಿಗಿನ ‘ಪ್ರಜಾವಾಣಿ’ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

 

* ಜನರು ಬಿಜೆಪಿಗೆ ಏಕೆ ಮತ ಹಾಕಬೇಕು?

-ಮೋದಿ ಆಡಳಿತದ ಅಧಿಯಲ್ಲಿ ದೇಶ ಸುಭದ್ರ, ಸುರಕ್ಷಿತ ಮತ್ತು ಅಭಿವೃದ್ಧಿಯಾಗಿದೆ. ವಿಶ್ವ ಮಟ್ಟದಲ್ಲಿ ಭಾರತ ಮುಂಚೂಣಿ ರಾಷ್ಟ್ರವಾಗಿದೆ. ಈ ಕಾರಣಕ್ಕೆ ಬಿಜೆಪಿಗೆ ಜನ ವೋಟ್‌ ಹಾಕಬೇಕು ಎಂಬುದು ನನ್ನ ಮನವಿ. ನಾನು ಯಾವುದೇ ಬಾನಗಡಿ ಮಾಡದ ಮನುಷ್ಯ ಎಂಬ ಕಾರಣಕ್ಕೆ ಜನ ನನ್ನನ್ನು ಇಷ್ಟಪಡುತ್ತಾರೆ. ಚುನಾವಣೆಯಲ್ಲಿ ಹಣ, ಹೆಂಡ, ಆಮಿಷ ಒಡ್ಡುವವನಲ್ಲ. ನಾನು ಪುಕ್ಕಟೆ ಗಿರಾಕಿ, ಒಂದು ದಿನ ಮತಗಟ್ಟೆಗೆ ಬಂದು ನನಗೆ ವೋಟ್‌ ಹಾಕಿ, ಐದು ವರ್ಷ ನಾನು ನಿಮ್ಮ ಕೆಲಸವನ್ನು ಪುಕ್ಕಟೆಯಾಗಿ ಮಾಡುತ್ತೇನೆ ಎಂಬ ಕಾರಣಕ್ಕೆ ಮತಹಾಕಿ ಎಂದು ಕೇಳುವೆ.

* ಚುನಾವಣಾ ಕಣ ಹೇಗಿದೆ?

-ಚುನಾವಣೆ ನಿರೀಕ್ಷೆಗಿಂತ ಚೆನ್ನಾಗಿದೆ. ನಾಲ್ಕೈದು ದಶಕದ ರಾಜಕಾರಣದ ಅನುಭವದ ಪ್ರಕಾರ ಜನರ ಮಿಡಿತ ಬಲ್ಲೆ. ಈ ಬಾರಿ ನೂರಕ್ಕೆ ನೂರರಷ್ಟು ನಾನು ಗೆಲ್ಲುತ್ತೇನೆ ಎಂಬುದು ಖಾತ್ರಿಯಾಗಿದೆ. ನಿರೀಕ್ಷೆ ಮೀರಿ ಜನರ ಸ್ಪಂದನೆ ವ್ಯಕ್ತವಾಗಿದೆ.

* ಜನರಿಗೆ ನೀಡಿದ ಭರವಸೆ ಅನುಷ್ಠಾನ ಆಗಿದೆಯಾ?

-ಮೂರು ಅವಧಿಯಲ್ಲಿ ಜನರಿಗೆ ನೀಡಿದ ಎಲ್ಲ ಭರವಸೆ ಈಡೇರಿಸಿದ್ದೇನೆ. ಬ್ರಿಟೀಷರ ಕಾಲದ ರೈಲ್ವೆ ನಿಲ್ದಾಣವನ್ನು ₹32 ಕೋಟಿ ಅನುದಾನದಲ್ಲಿ ನವೀಕರಣ ಮಾಡಲಾಗುತ್ತಿದೆ. ಅಲಿಯಾಬಾದ್‌ನಲ್ಲಿ ₹50 ಕೋಟಿ ಅನುದಾನದಲ್ಲಿ ಗೂಡ್ಸ್‌ಶೆಡ್‌ ನಿರ್ಮಾಣ ಮಾಡಲಾಗಿದೆ, ವಿಜಯಪುರದಲ್ಲಿ ರೈಲುಗಳು ತಂಗಲು ಅನುಕೂಲವಾಗುವಂತೆ ₹50 ಕೋಟಿ ವೆಚ್ಚದಲ್ಲಿ ಪಿಟ್‌ಲೈನ್‌ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಕೂಡಿಗಿಯಲ್ಲಿ ಎನ್‌ಟಿಪಿಸಿ ಆರಂಭವಾಗಿದೆ. ಇಂಡಿಯಲ್ಲಿ 76 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದೇನೆ. ರೈಲ್ವೆ ಡಬ್ಲಿಂಗ್‌ ಆಗಿದೆ. ಏಳು ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿವೆ. ₹1 ಲಕ್ಷ ಕೋಟಿ ಅನುದಾನ ಕ್ಷೇತ್ರಕ್ಕೆ ತಂದಿದ್ದೇನೆ.

* ಪಕ್ಷದಲ್ಲಿನ ಆಂತರಿಕ ಭಿನ್ನಮತ, ಅಸಮಾಧಾನ ಸರಿಹೋಗಿದೆಯೇ?

-ಪಕ್ಷದಲ್ಲಿ ಯಾವುದೇ ಅಸಮಾದಾನ ಇಲ್ಲ. ಎಲ್ಲವೂ ಸರಿ ಹೋಗಿದೆ. ಇಡೀ ರಾಜಕೀಯ ಜೀವನದಲ್ಲಿ ನಾನು ಸ್ವಂತಕ್ಕೆ ಒಂದು ಶಾಲೆ, ಕಾಲೇಜು, ಸಂಸ್ಥೆ, ಬ್ಯಾಂಕ್‌, ಕಾರ್ಖಾನೆ ಕಟ್ಟಿಲ್ಲ ಎಂಬ ಕಾರಣಕ್ಕೆ ಜನ ಇಷ್ಟಪಡುತ್ತಾರೆ. ಮುಂಜಾನೆ ಎಂಟಕ್ಕೆ ಶುರುವಾಗುವ ಜನರ ಒಡನಾಟ ರಾತ್ರಿ ಎಂಟರ ವರೆಗೂ ಇರುತ್ತದೆ. ಸಾಮಾನ್ಯ ಜನರ ಕೆಲಸ ಮಾಡಿಕೊಡುತ್ತಾ ಇದ್ದೇನೆ. ಜನರೊಂದಿಗೆ ನೇರ ಒಡನಾಟ ಇದೆ.

* ಸಂಸದರಾಗಿ ಪುನರಾಯ್ಕೆಯಾದರೆ ನಿಮ್ಮ ಆದ್ಯತೆಗಳೇನು?

-ವಿಜಯಪುರ-ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಶೀಘ್ರ ಸಂಚಾರ ಆರಂಭಿಸಲಿದೆ. ದೆಹಲಿಗೆ ಇನ್ನೊಂದು ರೈಲು ವಿಜಯ‍ಪುರ ಮಾರ್ಗವಾಗಿ ಹೋಗುವಂತೆ ಮಾಡುವೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಐಐಟಿ ಆರಂಭಕ್ಕೆ ಒತ್ತು ನೀಡುತ್ತೇನೆ. ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತೇನೆ.


Spread the love

About Laxminews 24x7

Check Also

ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ: ಕ್ರೀಡಾ ಸಾಮರ್ಥ್ಯ ಬೆಳೆಸಿಕೊಳ್ಳಿ- ಕಡಾಡಿ

Spread the love ಬೆಳಗಾವಿ: ‘ಇಂದಿನ ಮಕ್ಕಳು ಮತ್ತು ಯುವಜನರು ವಿದ್ಯಾರ್ಥಿ ಹಂತದಿಂದಲೇ ಕ್ರೀಡಾ ಸಾಮರ್ಥ್ಯ ಬೆಳೆಸಿಕೊಳ್ಳಬೇಕು’ ಎಂದು ರಾಜ್ಯಸಭಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ