ಬೆಳಗಾವಿ: ‘ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಎಲ್ಲೆಡೆ ಪ್ರಧಾನಿ ಮೋದಿ ಅವರ ಗಾಳಿ ಬೀಸುತ್ತಿದೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಚಿಕ್ಕೋಡಿಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಗೆಲ್ಲುತ್ತಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿವೆ.

ಅವರು ನನ್ನನ್ನು ಪ್ರಚಾರಕ್ಕೆ ಕರೆದಿಲ್ಲ. ಹಾಗಾಗಿ, ನಾನು ಹೋಗಿಲ್ಲ. ನಮ್ಮ ಕುಟುಂಬದವರೊಬ್ಬರು ಅಣ್ಣಾಸಾಹೇಬ ವಿರುದ್ಧ ನಿಂತಿದ್ದಾರೆ ಎಂಬ ಕಾರಣಕ್ಕೆ ಹೋಗಿಲ್ಲ ಎಂದರ್ಥವಲ್ಲ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲೇ ಹೆಚ್ಚು ಕ್ರಿಯಾಶೀಲವಾಗಿದ್ದೇನೆ’ ಎಂದರು.
‘ಜಗದೀಶ ಶೆಟ್ಟರ್ ಹೊರಗಿನವರು ಎನ್ನುವ ಆರೋಪಕ್ಕೆ ಈಗಾಗಲೇ ಅವರೇ ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್‌ನ ಜಿಲ್ಲೆಯ ನಾಯಕರಿಗೆ ಚುನಾವಣೆ ಬಂದಾಗ ಮಾತ್ರ ಸ್ವಾಭಿಮಾನ ನೆನಪಾಗುತ್ತದೆ. ಜಗದೀಶ ಶೆಟ್ಟರ್ ಹೊರಗಿನವರು ಎನ್ನುವುದನ್ನು ಜನ ಮರೆತಿದ್ದಾರೆ. ಈಗ ಈ ವಿಷಯ ಮುಗಿದ ಅಧ್ಯಾಯ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳಕರ ಲಿಂಗಾಯತ ಅಸ್ತ್ರ ಪ್ರಯೋಗಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಬಾಲಚಂದ್ರ, ‘ಚುನಾವಣೆ ಬಂದಾಗ ಇದೆಲ್ಲ ಸ್ವಾಭಾವಿಕ. ಜನರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ನರೇಂದ್ರ ಮೋದಿ ಮುಖಕ್ಕೆ ಹೆಚ್ಚಿನ ಗೌರವವಿದೆ. ಜಾತಿ ಕೆಲಸ ಮಾಡುವುದಿಲ್ಲ’ ಎಂದರು.
Laxmi News 24×7