ಚಿಕ್ಕೋಡಿ: ತಾಲ್ಲೂಕಿನ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯಲ್ಲಿ ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿನ ಬವಣೆ ತಲೆದೋರಿದೆ. ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಹನಿ ನೀರಿಗಾಗಿ ಜನರು ಪರಿತಪಿಸುತ್ತಿದ್ದಾರೆ. ಅದರಲ್ಲೂ ಜಲಬವಣೆ ಹೇಳತೀರದಾಗಿದೆ.
ಬೆಳಕೂಡ ಗ್ರಾಮ ಪಂಚಾಯಿತಿಯಲ್ಲಿ ಇದೊಂದೇ ಗ್ರಾಮವಿದ್ದು, 10ಕ್ಕೂ ಅಧಿಕ ತೋಟಪಟ್ಟಿಗಳಿವೆ.
3,900 ಜನಸಂಖ್ಯೆ ಇದ್ದು, ಮೂರು ವಾರ್ಡ್‌ಗಳಿವೆ. ಇಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ 12 ಕೊಳವೆಬಾವಿ ಇವೆ. ಈ ಪೈಕಿ ನಾಲ್ಕರಲ್ಲಿ ನೀರು ಲಭ್ಯವಿಲ್ಲ. ಉಳಿದ ಎಂಟು ಕೊಳವೆಬಾವಿಗಳಲ್ಲೂ ಅರ್ಧ ಗಂಟೆ ನೀರು ಬಂದರೂ ಹೆಚ್ಚು.
ಕೊಟಬಾಗಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಮೂಲಕ ಈ ಊರಿಗೆ ನೀರು ಪೂರೈಸಲಾಗುತ್ತಿದೆ. ಆದರೆ, ಗ್ರಾಮಕ್ಕೆ ನಿಯಮಿತವಾಗಿ ನೀರು ಬಂದು ತಲುಪುವುದು ಅಷ್ಟಕ್ಕಷ್ಟೇ. ಇಲ್ಲಿ ಹೆಚ್ಚಿರುವ ತೋಟಪಟ್ಟಿಗಳಿಗೆ ನೀರು ಪೂರೈಸುವುದು ಗ್ರಾಮ ಪಂಚಾಯಿತಿಗೂ ಸವಾಲಾಗಿದೆ.
ಇಲ್ಲಿನ ಸೀಮಿಕೋಡಿ, ಬಸವ ನಗರದ ತೋಟಪಟ್ಟಿ, ಗ್ರಾಮದ ಹೊರವಲಯದಲ್ಲಿನ ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರತಿದಿನ ನಾಲ್ಕರಿಂದ ಐದು ಟ್ರಿಪ್ ನೀರು ಪೂರೈಕೆಯಾದರೂ ಸಾಲುತ್ತಿಲ್ಲ. ಇನ್ನೂ ಹೆಚ್ಚಿನ ಟ್ಯಾಂಕರ್‌ಗಳಿಂದ ನೀರು ಕೊಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.