ನಾಲತವಾಡ: ಬೆಳಗಾವಿಯಿಂದ ನಾಲತವಾಡಕ್ಕೆ ಹಲವು ವಿಶೇಷತೆ ಒಳಗೊಂಡ ಬೆಳಗಾವಿ ಡಿಪೊದ ನೂತನ ಬಸ್ ಓಡಿಸಲಾಗುತ್ತಿದೆ.
ಈ ಬಸ್‌ನಲ್ಲಿ ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಬಸ್‍ನಲ್ಲಿ ಹೋಗೋಕೆ ಜೇಬ್‍ನಲ್ಲಿ ದುಡ್ಡು ಇರಲೇ ಬೇಕು ಎನ್ನುವಂತಿಲ್ಲ.
ಬಸ್‍ಗಳಲ್ಲಿ ಟಿಕೆಟ್ ಪಡೆಯಲು ಬೆಳಗಾವಿಯ ಈ ಬಸ್ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ. ಇನ್ಮುಂದೆ ನಿಮ್ಮ ಮೊಬೈಲ್‌ನಲ್ಲಿ ಯುಪಿಐ ಪೇಮೆಂಟ್ ಅವಕಾಶ ಇದ್ರೆ ಸಾಕು ಬಸ್‌ನಲ್ಲಿ ಟಿಕೆಟ್ ಪಡೆಯಬಹುದು. ಫೋನ್ ಪೇ, ಗೂಗಲ್ ಪೇ ಸೇರಿದಂತೆ ಯುಪಿಐ ಮೂಲಕ ಪೇಮೆಂಟ್ ಮಾಡಬಹುದು.
ಪ್ರಯಾಣ ದರದ ಹಣ ನೇರವಾಗಿ ನಿರ್ವಾಹಕನ ಮೊಬೈಲ್ ಫೋನ್ ಗೆ ಜಮೆಯಾಗಲಿದೆ. ಇದನ್ನು ನೋಡಿ ಕಂಡಕ್ಟರ್ ಟಿಕೆಟ್ ಕೊಡುತ್ತಾರೆ. ಬೆಳಗಾವಿ ಡಿವಿಜನ್ ನ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಆರಂಭ ಮಾಡಲಾಗಿದೆ. ಆಧಾರ್ ಕಾರ್ಡ್ ಇರುವ ಮಹಿಳೆಯರು, ಅಂಗವಿಕಲರ ಗುರುತಿನ ಚೀಟಿ ಉಳ್ಳವರು, ಪತ್ರಕರ್ತರ ಗುರುತಿನ ಚೀಟಿಯನ್ನು ಪಡೆದವರು ಸಹ ಈ ಬಸ್ ನಲ್ಲಿ ಸಂಚರಿಸಬಹುದು.
ಅನುಕೂಲಗಳು
ನಗದು ರಹಿತ ಪಾವತಿ, ಮೊಬೈಲ್‌ನಲ್ಲಿ ಯುಪಿಐ ಆಯಪ್ ಇದ್ದರೆ ಸಾಕು ಬಸ್‌ನಲ್ಲಿ ಸಂಚರಿಸಬಹುದು. ಮೊಬೈಲ್ ಯುಪಿಐ ಮೂಲಕ ಪೇಮೆಂಟ್ ಮಾಡಿ ಟಿಕೆಟ್ ಪಡೆಯಬಹುದು. ಚಿಲ್ಲರೆ ಸಮಸ್ಯೆಯಿಂದ ಮುಕ್ತಿ ಸಿಗುತ್ತೆ. ಚಿಲ್ಲರೆ ಇಲ್ಲ ಅನ್ನೋ ಪ್ರಯಾಣಿಕರು ಮತ್ತು ಕಂಡಕ್ಟರ್ ಜಗಳದ ಸಮಸ್ಯೆ ದೂರವಾಗುತ್ತೆ, ಇಬ್ಬರು, ಮೂವರು ಪ್ರಯಾಣಿಕರ ನಡುವೆ ಜಂಟಿಯಾಗಿ ಚಿಲ್ಲರೆ ಕೊಡುವ ಪರಿಪಾಠ ಇರುವುದಿಲ್ಲ, ಪ್ರಯಾಣಿಕ ಮನೆಗೆ ಬಂದ ಮೇಲೆ ‘ಅಯ್ಯೋ ಕಂಡಕ್ಟರ್ ಚಿಲ್ಲರೆ ಕೊಡಬೇಕಿತ್ತು, ಮರೆತೆ..!’ ಎನ್ನುವ ತಾಕಲಾಟವೂ ಇರದು. ಸ್ಟೇಜ್ ಬಂತು ಕಂಡಕ್ಟರ್ ಟಿಕೆಟ್ ನೀಡಿಲ್ಲ ಅನ್ನೋ ಭಯವಿರಲ್ಲ. ಕಂಡಕ್ಟರ್ ಹಾಗೂ ಪ್ರಯಾಣಿಕರಿಬ್ಬರಿಗೂ ಸಮಯ ಉಳಿತಾಯವಾಗುತ್ತೆ. ಸಾರಿಗೆ ಸಂಸ್ಥೆಗೆ ಆಗುವ ನಷ್ಟ ತಡೆಯುವ ಜಾಣತನ ಇದಾಗಿದೆ.