ಬೆಂಗಳೂರು, ಜನವರಿ 25: ನಗರ ಸ್ವಚ್ಛತೆಯಲ್ಲಿ ನಿರತರಾಗಿರುವ ಪೌರ ಕಾರ್ಮಿಕರಿಗೆ ನೆರವಾಗುವುದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) ಹ್ಯಾಂಡ್ ಹೆಲ್ಡ್ ಮೆಕ್ಯಾನಿಕಲ್ ಸ್ವೀಪರ್‌ಗಳನ್ನು (Hand-held Mechanical Sweepers) ಅಥವಾ ಕಸ ಗುಡಿಸುವ ಯಂತ್ರಗಳನ್ನು ಖರೀದಿಸಲು ನಿರ್ಧರಿಸಿದೆ. ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಈ ಯಂತ್ರಗಳನ್ನು ಖರೀದಿಸಲಾಗುತ್ತದೆ.
ಹ್ಯಾಂಡ್ ಹೆಲ್ಡ್ ಮೆಕ್ಯಾನಿಕಲ್ ಸ್ವೀಪರ್‌ಗಳನ್ನು ಖರೀದಿಸಲು ಈ ಹಿಂದೆಯೂ ಎರಡು ಬಾರಿ ಯತ್ನಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಎರಡು ವಿಫಲ ಪ್ರಯತ್ನಗಳ ನಂತರ ಇದೀಗ ಬಿಬಿಎಂಪಿ ಮೂರನೇ ಬಾರಿಗೆ ಹ್ಯಾಂಡ್ ಹೆಲ್ಡ್ ಮೆಕ್ಯಾನಿಕಲ್ ಸ್ವೀಪರ್‌ಗಳ ಖರೀದಿಗೆ ಕ್ರಮ ಕೈಗೊಳ್ಳುತ್ತಿದೆ.
ಪ್ರತಿ ಯಂತ್ರಕ್ಕೆ 40 ಸಾವಿರ ರೂಪಾಯಿ ವೆಚ್ಚವಾಗಲಿದೆ ಎಂದು ಬಿಬಿಎಂಪಿ ತಿಳಿಸಿದೆ. ನಗರವನ್ನು ಧೂಳಿನಿಂದ ಮುಕ್ತಗೊಳಿಸುವುದಕ್ಕಾಗಿ 15 ನೇ ಹಣಕಾಸು ಆಯೋಗದಿಂದ ಈ ಯೋಜನೆಗೆ ಹಣ ನೀಡಲಾಗಿದೆ.
ಎಲ್ಲಾ 15,450 ಪೌರಕಾರ್ಮಿಕರು 11,000 ಕಿಲೋಮೀಟರ್ ವಾರ್ಡ್ ಅಥವಾ ವಲಯ ರಸ್ತೆಗಳನ್ನು ಸ್ವಚ್ಛಗೊಳಿಸಲು ಹ್ಯಾಂಡ್ ಹೆಲ್ಡ್ ಮೆಕ್ಯಾನಿಕಲ್ ಸ್ವೀಪರ್‌ಗಳನ್ನು ಪಡೆಯಲಿದ್ದಾರೆ. ಪ್ರಸ್ತುತ ಕೆಲವು ರಸ್ತೆಗಳನ್ನು ಮೆಕ್ಯಾನಿಕಲ್ ಸ್ವೀಪರ್‌ಗಳ ಮೂಲಕ ಗುಡಿಸಲಾಗುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ.