ಬೆಂಗಳೂರು : ಚೆಕ್ ಬೌನ್ಸ್ ಪ್ರಕರಣದಲ್ಲಿ ದಂಡಕ್ಕೆ ಗುರಿಯಾಗಿರುವ ಸಚಿವ ಮಧು ಬಂಗಾರಪ್ಪ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಮಧು ಬಂಗಾರಪ್ಪ ಶಿಕ್ಷಣ ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿ, ರಾಜ್ಯದ ಶಿಕ್ಷಣ ಇಲಾಖೆಯನ್ನು ಹಳ್ಳ ಹಿಡಿಸಿದ್ದೇ ಅವರ ದೊಡ್ಡ ಸಾಧನೆ ಎಂದು ಟೀಕಿಸಿದೆ.
ಚೆಕ್ ಬೌನ್ಸ್ ಪ್ರಕರಣದಲ್ಲಿ ಮಧು ಬಂಗಾರಪ್ಪ ದೋಷಿ ಎಂದು ಬೆಂಗಳೂರಿನ ನ್ಯಾಯಾಲಯ ತೀರ್ಪು ನೀಡಿದೆ. ಸಂಸದರು/ಶಾಸಕರನ್ನು ಒಳಗೊಂಡ ಪ್ರಕರಣಗಳ ವಿಶೇಷ ನ್ಯಾಯಾಲಯವು ದೂರುದಾರರಾದ ರಾಜೇಶ್ ಎಕ್ಸ್‌ಪೋರ್ಟ್ಸ್‌ಗೆ ರೂ.6.96 ಕೋಟಿ ಪಾವತಿಸುವಂತೆ ಮತ್ತು ರೂ.10,000 ದಂಡವನ್ನು ರಾಜ್ಯಕ್ಕೆ ನೀಡುವಂತೆ ಸೂಚಿಸಿದೆ. ಹಣ ಪಾವತಿಸಲು ವಿಫಲವಾದಲ್ಲಿ ಸಚಿವರು 6 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.
ಈ ವಿಚಾರವನ್ನ ಪ್ರಮುಖ ಅಸ್ತ್ರವನ್ನಾಗಿಸಿಕೊಂಡ ಬಿಜೆಪಿ, ನ್ಯಾಯಾಲಯದಿಂದ ದಂಡ ಹಾಕಿಸಿಕೊಂಡಿರುವ ಮಹಾನುಭಾವರು ಕರ್ನಾಟಕದ ಶಿಕ್ಷಣ ಸಚಿವರು. ಬಹುಪಾಲು ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ, ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್ ಇನ್ನು ತಲುಪಿಲ್ಲ, ವಾರಕ್ಕೊಂದು ದಿನ ಬಿಸಿಯೂಟ ದೊರೆತರೇ ಅದೇ ಹೆಚ್ಚು. ಸಿಎಂ ಸಿದ್ದರಾಮಯ್ಯನವರೇ ಇಂತಹ ಶಿಕ್ಷಣ ಸಚಿವರು ರಾಜ್ಯಕ್ಕೆ ಬೇಕೇ.? ಅಶಿಸ್ತಿನ ಸಚಿವರ ರಾಜೀನಾಮೆ ಪಡೆದು ರಾಜ್ಯ ಶಿಕ್ಷಣ ಇಲಾಖೆಗೆ ಹಿಡಿದಿರುವ ಗ್ರಹಣಕ್ಕೆ ಮುಕ್ತಿ ನೀಡಿ ಎಂದು ಟ್ವೀಟ್ ಮಾಡಿದೆ.