ಬೆಂಗಳೂರು: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ಮೊದಲು ಬಂಡಾಯ ಕಾಣಿಸಿಕೊಂಡಿದ್ದೇ ಬೆಳಗಾವಿಯಲ್ಲಿ. ಇದೀಗ ಬಿಎಸ್‍ವೈ ಸರ್ಕಾರದ ವಿರುದ್ಧವೂ ಬಂಡಾಯ ಹೊಗೆ ಮೊದಲು ಕಾಣಿಸಿಕೊಂಡಿರೋದು ಬೆಳಗಾವಿಯಲ್ಲಿ ಎನ್ನುವುದು ವಿಶೇಷ.
ಅಂದು ರಮೇಶ್ ಜಾರಕಿಹೊಳಿ ಬಂಡಾಯ ಎದ್ದಿದ್ರೆ ಇಂದು ಉಮೇಶ್ ಕತ್ತಿ ಬಂಡೆದ್ದಿದ್ದಾರೆ. ಇವರಿಗೆ ರಮೇಶ್ ಜಾರಕಿಹೊಳಿ ತೆರೆಮರೆಯಲ್ಲಿ ಬೆಂಬಲ ನೀಡ್ತಿದ್ದಾರೆ ಎನ್ನಲಾಗಿದೆ. ಆದ್ರೆ, ಹೊರಗಡೆ ಮಾತ್ರ ರಮೇಶ್ ಜಾರಕಿಹೊಳಿ, ಹೈಕಮಾಂಡ್ ಅವಕಾಶ ಕೊಟ್ರೆ ಮತ್ತೆ ಆಪರೇಷನ್ ಕಮಲ ನಡೆಸುತ್ತೇನೆ. ಕಾಂಗ್ರೆಸ್‍ನ 22 ಶಾಸಕರು ನನ್ನ ಸಂಪರ್ಕದಲ್ಲಿ ಇದ್ದು, ಬೇಕಿದ್ರೆ ಈ ವಾರದಲ್ಲೇ ಐವರ ರಾಜೀನಾಮೆ ಕೊಡಿಸ್ತೇನೆ ಎಂಬ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯೇ ಯಾಕೆ?
ಮುಂದಿನ ತಿಂಗಳು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯಲಿದೆ. ಬ್ಯಾಂಕ್ ಗದ್ದುಗೆಗಾಗಿ ಬೆಳಗಾವಿ ಬಿಜೆಪಿಯಲ್ಲಿ ಬಣ ರಾಜಕೀಯ ಜೋರಾಗಿದೆ. ಸವದಿ, ಜೊಲ್ಲೆ, ಕೋರೆ ಪ್ರಾಬಲ್ಯ ತಗ್ಗಿಸಲು `ಡಬಲ್’ ಪ್ಲಾನ್ ನಡೆಯುತ್ತಿದೆ. ಕತ್ತಿ ಬ್ರದರ್ಸ್‍ಗೆ `ಸಾಹುಕಾರ’ನ ಪರೋಕ್ಷ ಬೆಂಬಲ ಇದೆ ಎನ್ನಲಾಗುತ್ತಿದೆ.
ಬ್ಯಾಂಕ್ ಸದಸ್ಯರ ಹಿಡಿದಿಟ್ಟುಕೊಳ್ಳಲು ಕೋಟಿ ಕೋಟಿ ಖರ್ಚು ಮಾಡಲು ನಾಯಕರು ಸಿದ್ಧರಿದ್ದರೂ ಮಹೇಶ್ ಕುಮಟಳ್ಳಿಗೆ ಪಟ್ಟ ಕಟ್ಟಲು ಸಿಎಂ ಮುಂದಾಗಿದ್ದಾರೆ. ಆದರೆ ಡಿಸಿಎಂ ಸವದಿಗೆ ತಮ್ಮ ಆಪ್ತನಿಗೆ ಪಟ್ಟ ಕಟ್ಟುವ ಆಸೆ. ಹೀಗಾಗಿ ಈಗ ಕತ್ತಿ, ಜಾರಕಿಹೊಳಿ ವರ್ಸಸ್ ಸವದಿ, ಕೋರೆ ತಂಡದ ಮಧ್ಯೆ ಫೈಟ್ ನಡೆಯುತ್ತಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಸಿ ಡಿಕೆ ಶಿವಕುಮಾರ್ ಬೆಳಗಾವಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರಿಂದಲೇ ಮೊದಲ ಬಂಡಾಯ ಆರಂಭವಾಗಿತ್ತು. ಈ ಬಂಡಾಯ ಲೋಕಸಭೆ ಚುನಾವಣೆಯ ಬಳಿಕ ಜಾಸ್ತಿಯಾಗಿ ಕೊನೆಗೆ ಸರ್ಕಾರವೇ ಪತನಗೊಂಡಿತ್ತು. ಈಗ ಮತ್ತೆ ಬೆಳಗಾವಿಯಲ್ಲೇ ಬಂಡಾಯ ಆರಂಭವಾಗಿದ್ದು ಈ ಬಣ ರಾಜಕೀಯ ಬಿಎಸ್‍ವೈ ಸರ್ಕಾರ ಬಲಿ ಪಡೆಯುತ್ತಾ ಎಂಬ ಪ್ರಶ್ನೆ ಎದ್ದಿದೆ.