ಬೆಂಗಳೂರು: ರಾಜ್ಯ ಬಿಜೆಪಿ (BJP) ಅಧ್ಯಕ್ಷ ಸ್ಥಾನ ಹಾಗೂ ವಿಪಕ್ಷ ಸ್ಥಾನದ ಆಯ್ಕೆ ಕುರಿತಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yathnal) ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಹಾಗೂ ಬಿ.ವೈ. ವಿಜಯೇಂದ್ರ (BY Vijayendra) ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ತಮ್ಮ ಅಸಮಾಧಾನ ಹೊರಹಾಕುತ್ತಾ ಬಂದಿದ್ದಾರೆ.
ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ನಿಂದ ಬುಲಾವ್ ಬಂದಿದ್ದು, ಬಸನಗೌಡ ಪಾಟೀಲ ದೆಹಲಿಗೆ ತೆರಳಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದರು. ಅಲ್ಲದೇ, ಯತ್ನಾಳ್ ಹಾಗೂ ಯಡಿಯೂರಪ್ಪ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ. ಹಲವು ಬಾರಿ ಯತ್ನಾಳ್ ಅವರು ಬಹಿರಂಗವಾಗಿಯೇ ಅಪ್ಪ-ಮಗನ ಮೇಲಿನ ಕೋಪವನ್ನು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಗೆ (Delhi) ಬರಲು ಹೈಕಮಾಂಡ್ ಸೂಚನೆ ನೀಡಿದ್ದರಿಂದ ಯತ್ನಾಳ ದೆಹಲಿಗೆ ತೆರಳಿದ್ದಾರೆ.
ಕೆಲವು ದಿನಗಳ ಹಿಂದೆ ಹೈಕಮಾಂಡ್ ರಾಜ್ಯದ ನೂತನ ಬಿಜೆಪಿ ಅಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಹಾಗೂ ವಿಪಕ್ಷ ನಾಯಕನಾಗಿ ಆರ್. ಅಶೋಕ್ (R. Ashok) ಅವರನ್ನು ನೇಮಕ ಮಾಡಿದ್ದು, ಈ ವಿಷಯದ ಕುರಿತಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದ ವಿರುದ್ಧ ಹಾಗೂ ಬಿಎಸ್ ಯಡಿಯೂರಪ್ಪ, ವಿಜಯೇಂದ್ರ, ಆರ್ ಅಶೋಕ್ ಸೇರಿದಂತೆ ಹಲವರ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದ್ದರು.
ಅಲ್ಲದೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಹಾಗೂ ಸಚಿವ ವಿ. ಸೋಮಣ್ಣ (V.Somanna) ಅವರ ಸೋಲಿಗೆ ಬಿ.ವೈ. ವಿಜಯೇಂದ್ರ ಅವರೇ ಹೊಣೆ ಎಂದು ಸ್ಪೋಟ ವಾದಂತ ಹೇಳಿಕೆ ಕೂಡ ನೀಡಿದ್ದರು. ಇದರಿಂದಾಗಿ ಸ್ವ ಪಕ್ಷದ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದ ಯತ್ನಾಳ್, ಬಿಜೆಪಿ ನಾಯಕರಿಗೆ ತಲೆ ನೋವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಬುಲಾವ್ ಮೇರೆಗೆ ಯತ್ನಾಳ್ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.