ಕಿಡ್ನಿಯಲ್ಲಿ ಒಂದೆರೆಡು ಕಲ್ಲುಗಳು ಇರುವುದನ್ನು ನೋಡಿದ್ದೇವೆ. ಆದರೆ, ತೈವಾನ್ ಮೂಲದ ಮಹಿಳೆಯೊಬ್ಬಳ ಕಿಡ್ನಿಯಿಂದ ಬರೋಬ್ಬರಿ 300 ಕಲ್ಲುಗಳನ್ನು ಆಪರೇಷನ್ ಮೂಲಕ ಹೊರತೆಗೆಯಲಾಗಿದ್ದು, ವೈದ್ಯರನ್ನೇ ಅಚ್ಚರಿಗೆ ದೂಡಿದೆ. ಅದರಲ್ಲೂ ಅಷ್ಟೊಂದು ಕಿಡ್ನಿ ಸ್ಟೋನ್ಸ್ಗೆ ಕಾರಣ ಏನು ಅಂತಾ ಕೇಳಿದ್ರೆ ಆಘಾತವಾಗೋದು ಖಂಡಿತ.
ಬೆನ್ನಿನ ಕೆಳಭಾಗದಲ್ಲಿ ತೀವ್ರ ನೋವು ಮತ್ತು ಜ್ವರದಿಂದ ಬಳಲುತ್ತಿದ್ದ ಕ್ಸಿಯಾವೋ ಯು ಹೆಸರಿನ ಮಹಿಳೆ ಕೆಲ ದಿನಗಳ ಹಿಂದಷ್ಟೇ ತೈವಾನ್‌ನ ಚಿ ಮೆಯಿ ವೈದ್ಯಕೀಯ ಕೇಂದ್ರಕ್ಕೆ ದಾಖಲಾಗಿದ್ದಳು. ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿದ ತುರ್ತು ವಿಭಾಗದ ವೈದ್ಯರು, ಆಕೆಯ ಕಿಡ್ನಿಯು ಹೆಚ್ಚು ಅಪಾಯದಲ್ಲಿರುವುದನ್ನು ಗಮನಿಸಿದರು. ಕಿಡ್ನಿಯು ದ್ರವದಿಂದ ತುಂಬಿ ಊದಿಕೊಂಡಿತ್ತು ಮತ್ತು ಅದರೊಳಗೆ ಕಲ್ಲುಗಳಿದ್ದವು ಎಂಬ ಮಾಹಿತಿ ದೊರಕಿದೆ. ಕಲ್ಲುಗಳು ಸುಮಾರು 5 ಮಿಲಿ ಮೀಟರ್ನಿಂದ 2 ಸೆ.ಮೀ ಗಾತ್ರದಲ್ಲಿವೆ ಎಂಬುದು ಸಿಟಿ ಸ್ಕ್ಯಾನ್ನಿಂದ ತಿಳಿಯಿತು. ಬಳಿಕ ರಕ್ತ ಪರೀಕ್ಷೆ ಮಾಡಿದಾಗ ಬಿಳಿ ರಕ್ತಕಣಗಳು ಹೆಚ್ಚಾಗಿರುವುದು ಗೊತ್ತಾಯಿತು. ಬಳಿಕ ವೈದ್ಯರು ಆಕೆಗೆ ಆಯಂಟಿ ಬಯಾಟಿಕ್ ನೀಡಿ, ಕಿಡ್ನಿಯಲ್ಲಿದ್ದ ದ್ರವವನ್ನು ಹೊರಗೆ ತೆಗೆದರು. ಬಳಿಕ ಮಿನಿಮಲಿ ಇನ್ವೆಸಿವ್ ಸರ್ಜರಿ ಮಾಡಿ 300ಕ್ಕೂ ಅಧಿಕ
ಕಲ್ಲುಗಳನ್ನು ಹೊರ ತೆಗೆದರು. ಆಪರೇಷನ್ ಬಳಿಕ ರೋಗಿಯ ಆರೋಗ್ಯ ಸ್ಥಿರವಾಗಿದೆ. ಕೆಲವು ದಿನಗಳವರೆಗೆ ತಪಾಸಣೆ ನಡೆಸಿ ಡಿಸ್ಚಾರ್ಜ್ ಮಾಡಲಾಗಿದೆ.
ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ ಮೂತ್ರಶಾಸ್ತ್ರಜ್ಞ ಡಾ ಲಿಮ್ ಚೈ-ಯಾಂಗ್ ಮಾತನಾಡಿ, ತೈವಾನ್‌ನ 9.6 ಪ್ರತಿಶತ ಜನರು ತಮ್ಮ ಜೀವಿತಾವಧಿಯಲ್ಲಿ ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಾರೆ. ಇದರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು. ಕಿಡ್ನಿ ಕಲ್ಲುಗಳಿಂದ ಬಳುವುದರಲ್ಲಿ 50 ರಿಂದ 60 ವರ್ಷದೊಳಗಿನವರೇ ಹೆಚ್ಚು ಎಂದಿದ್ದಾರೆ. ಬಿಸಿ ವಾತಾವರಣದಿಂದ ಬೇಸಿಗೆಯಲ್ಲಿ ಕಿಡ್ನಿ ಕಲ್ಲಿನ ಪ್ರಕರಣಗಳು ಸಾಮಾನ್ಯವಾಗಿವೆ. ಬೇಸಿಗೆಯಲ್ಲಿ ಜನರು ಹೆಚ್ಚು ನಿರ್ಜಲೀಕರಣಗೊಳ್ಳುತ್ತಾರೆ. ಇದರಿಂದ ಮೂತ್ರವು ಹೆಚ್ಚು ಕೇಂದ್ರೀಕೃತವಾದಾಗ ಅದರೊಳಗೆ ಖನಿಜಗಳು ಸೇರಿ ಸ್ಫಟಿಕೀಕರಣಗೊಂಡು ಕಲ್ಲುಗಳನ್ನು ರೂಪಿಸುತ್ತವೆ ಎಂದು ಲಿಮ್ ಚೈ-ಯಾಂಗ್ ತಿಳಿಸಿದರು. ಆಪರೇಷನ್ಗೆ ಒಳಗಾದ ಕ್ಸಿಯಾವೋ ಯು ಹೆಚ್ಚು ನೀರು ಕುಡಿಯುವುದಿಲ್ಲ,
ಅದರ ಬದಲಾಗಿ ತೈವಾನ್‌ನ ಪ್ರಸಿದ್ಧ ಬಬಲ್ ಟೀ ಅನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದರಿಂದಲೇ ಆಕೆಗೆ ಕಿಡ್ನಿ ಕಲ್ಲು ಉಂಟಾಗಿದೆ. ಹೆಚ್ಚಾಗಿ ಟೀ ಸೇವನೆ ಮಾಡುವುದು ಕೂಡ ಉತ್ತಮವಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ, ಕಿಡ್ನಿ ಕಲ್ಲು ಅನುವಂಶೀಯವಾಗಿಯೂ, ದೀರ್ಘಕಾಲದ ಕಾಯಿಲೆಗಳಿಂದಲೂ ಹಾಗೂ ಹೆಚ್ಚು ಕ್ಯಾಲ್ಸಿಯಂ ಮತ್ತು ಪ್ರೋಟೀನ್ಭರಿತ ಆಹಾರ ಸೇವನೆಯಿಂದಲೂ ಬರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.
Laxmi News 24×7