Breaking News

ಶಿರಸಿ: ಶಾಲ್ಮಲಾ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಸಾವು

Spread the love

ಶಿರಸಿ: ರಜೆಯ ದಿನ ಕಳೆಯಲು ತೆರಳಿದ್ದ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶಾಲ್ಮಲಾ ನದಿಯಲ್ಲಿ ಇಂದು ನಡೆದಿದೆ.

ಇತ್ತೀಚೆಗೆ ಶಿರಸಿಯ ಬಂಡಲದಲ್ಲಿ ಸಂಭವಿಸಿದ್ದ ಬಸ್​ ಮತ್ತು ಕಾರು ನಡುವಿನ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಜರುಗಿದೆ.‌

ಶಿರಸಿಯ ಭೈರುಂಭೆ ಸಮೀಪ ಶಾಲ್ಮಲಾ ನದಿಯಲ್ಲಿ ಘಟನೆ ಸಂಭವಿಸಿದೆ.‌ ಮೃತರೆಲ್ಲರೂ ಶಿರಸಿ ನಗರದವರು. ರಾಮನಬೈಲಿನ ಮೌಲಾನಾ ಅಹಮ್ಮದ್ ಸಲೀಂ ಕಲೀಲ್ (44), ನಾದಿಯಾ ನೂರ್ ಅಹಮದ್ ಶೇಖ್ (20), ಕಸ್ತೂರಬಾ ನಗರದ ಮಿಸ್ಬಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್ (22) ಹಾಗೂ ಯುವಕ ಉಮರ್ ಸಿದ್ದಿಕ್ (23) ಮೃತರು. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ನಡೆಸಿದ್ದು, ಸಂಜೆ ವೇಳೆಗೆ ಮೂವರ ಮೃತದೇಹ ಪತ್ತೆ ಮಾಡಲಾಗಿದೆ. ಇನ್ನುಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಆಗಿದ್ದೇನು?: ಶಾಲ್ಮಲಾ ನದಿ ತೀರವು ಪ್ರವಾಸಿ ತಾಣವಾಗಿದ್ದು, ರಜೆಯ ದಿನದಂದು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ, ಇಲ್ಲಿಯೇ ಅಡುಗೆ ತಯಾರಿಸಿ, ಊಟ ಮಾಡಿ ಸಂಜೆಯವರೆಗೂ ಇದ್ದು ಹೋಗುತ್ತಾರೆ. ನದಿಯಲ್ಲಿ ಘಟನೆ ನಡೆದ ಸ್ಥಳವಾದ ಭೂತನಗುಂಡಿ ಆಳವಾಗಿದ್ದು, ಇಲ್ಲಿಯ ಕಲ್ಲುಬಂಡೆಗಳು ಜಾರುವುದರಿಂದ ನೀರಿಗಿಳಿಯದಂತೆ ಸೂಚನಾ ಫಲಕವನ್ನೂ ಅಳವಡಿಸಲಾಗಿದೆ.

ರಾಮನಬೈಲು ಮತ್ತು ಕಸ್ತೂರಬಾ ನಗರದ ಒಂದೇ ಕುಟುಂಬದ ಸುಮಾರು 25 ಜನರು ಭಾನುವಾರ ಶಾಲ್ಮಲಾ ನದಿಯ ಭೂತನಗುಂಡಿ ಬಳಿ ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಅವರೊಂದಿಗೆ ಬಂದಿದ್ದ ಮಗುವೊಂದು ಆಟ ಆಡುತ್ತ ನದಿ ನೀರಿಗೆ ಬಿದ್ದಿದೆ. ತಕ್ಷಣವೇ ನೀರಿಗೆ ಜಿಗಿದ ಮೌಲಾನಾ ಅಹಮ್ಮದ್, ಮಗುವನ್ನು ನೀರಿನಿಂದ ಎತ್ತಿಕೊಂಡು, ಅದರ ತಾಯಿ ನಾದಿಯಾ ಅವರಿಗೆ ನೀಡಿದ್ದಾರೆ. ಆದರೆ, ಮಗುವನ್ನು ದಡಕ್ಕೆ ಬಿಟ್ಟು ನೀರಿನಿಂದ ಮೇಲೆ ಬರುವಾಗ ಕಾಲು ಜಾರಿ ಇಬ್ಬರೂ ಮುಳುಗಿದ್ದಾರೆ. ಅವರನ್ನು ರಕ್ಷಿಸುವ ಸಲುವಾಗಿ ನೀರಿಗೆ ಜಿಗಿದ ಮತ್ತೆ ಮೂವರೂ ಸಹ ನೀರಿನಿಂದ ಮೇಲೇಳಲಾಗದೇ ಮುಳುಗಿ ಸಾವಿಗೀಡಾಗಿದ್ದಾರೆ. ಮಗು ಸುರಕ್ಷಿತವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ