ಬಾಗಲಕೋಟೆ, ಡಿ.16: ಜಿಲ್ಲೆಯು ಒಂದು ಕಾಲದಲ್ಲಿ ಹೆಚ್ಐವಿ(HIV)ಯಲ್ಲಿ ರಾಜ್ಯದಲ್ಲೇ ನಂಬರ್ ಒನ್ ಸ್ಥಾನದಲ್ಲಿತ್ತು. ಇದೀಗ ಕಾಲ ಕ್ರಮೇಣ ಆ ನಂಬರ್ನಿಂದ ಮುಕ್ತವಾಗಿದೆ. ಆದರೆ, ಸದ್ಯ ಜಿಲ್ಲೆಯಲ್ಲಿ ಸದ್ದಿಲ್ಲದೆ ಬಾಲ್ಯ ವಿವಾಹ (Child marriage) ಪ್ರಕರಣಗಳು ಹೆಚ್ಚುತ್ತಾ ಸಾಗುತ್ತಿವೆ.ಬಡ ಮಧ್ಯಮವರ್ಗ, ಹಿಂದುಳಿ ವರ್ಗ ಹಾಗೂ ಎಸ್ ಸಿ ಸಮುದಾಯದಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹಗಳು ಕಂಡು ಬರುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇದನ್ನು ತಡೆಯುವುದಕ್ಕೆ ಜಾಗೃತಿ ಜೊತೆಗೆ ಕಠಿಣ ಕಾನೂನು ಇದ್ದರೂ ಕೂಡ ಈ ಪಿಡುಗು ನಿಲ್ಲುತ್ತಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವರದಿ ಪ್ರಕಾರ 2023 ರಲ್ಲೇ 79 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ.
2023 ರಲ್ಲೇ 79 ಬಾಲ್ಯ ವಿವಾಹ ಪ್ರಕರಣಗಳು
2023 ರಲ್ಲೇ 79 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದರೆ, ಅದರಲ್ಲಿ 57 ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದಿದ್ದಾರೆ. ಆದರೂ ಸದ್ದಿಲ್ಲದೆ 16 ಬಾಲ್ಯ ವಿವಾಹಗಳು ನಡೆದಿವೆ. ಜೊತೆಗೆ 8 ಎಫ್‌ಐಆರ್ ಕೂಡ ಆಗಿವೆ. ಇನ್ನು ಕೋವಿಡ್ 2021 ರಲ್ಲಿ 91 ಬಾಲ್ಯವಿವಾಹ ತಡೆಯಲಾಗಿ, 15 ಬಾಲ್ಯವಿವಾಹ ನಡೆದಿತ್ತು.
ಬಾಗಲಕೋಟೆ ಜಿಲ್ಲೆಯಲ್ಲಿ ಮೊದಲು ಹೆಚ್ಐವಿ ನಿಯಂತ್ರಣ ಮಾಡುವುದು ತಲೆ ನೋವಾಗಿತ್ತು. ಆದರೆ, ಹೆಚ್ ಐ ವಿ ಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಕಳಂಕವನ್ನು ಬಾಗಲಕೋಟೆ ಕಳೆದುಕೊಂಡಿದೆ. ಆದರೆ, ಈಗ ಬಾಲ್ಯವಿವಾಹ ತಲೆನೋವಾಗಿ ಪರಿಣಮಿಸುತ್ತಿದೆ. ಹದಿಹರೆಯದ ಬಾಲೆಯರನ್ನು ಸದ್ದಿಲ್ಲದೆ ಹಸೆಮಣಿಯಲ್ಲಿ ಕೂರಿಸಲಾಗುತ್ತಿದೆ.