ಬೆಂಗಳೂರು:ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿಯೇ ನಡೆದಿರುವ ದಾಳಿಯ ಹೊಣೆಯನ್ನು ಪ್ರಧಾನಮಂತ್ರಿ, ಗೃಹ ಸಚಿವ ಮತ್ತು ಸ್ಪೀಕರ್ ಅವರು ಹೊರಬೇಕು ಮತ್ತು ಕೂಡಲೆ ಅವರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಸಂಸತ್ ಭವನದ ಮೇಲೆ ದಾಳಿ ನಡೆದು 22 ವರ್ಷ ತುಂಬಿದ ಸಂದರ್ಭದಲ್ಲಿಯೇ ಈ ದಾಳಿ ಆಗಿರುವುದು ಆತಂಕಕಾರಿ ಸಂಗತಿ ಎಂದರು.
ಸಂಸತ್ ಪ್ರಜಾಪ್ರಭುತ್ವದ ದೇಗುಲವಿದ್ದಂತೆ. ಅಲ್ಲಿಗೆ ಭದ್ರತೆ ಕೊಡಲಾಗದವರು ಇನ್ನು ದೇಶಕ್ಕೆ ಯಾವ ರೀತಿ ಭದ್ರತೆ ನೀಡಲು ಸಾಧ್ಯ? ಐದಾರು ಹಂತದಲ್ಲಿ ಭದ್ರತಾ ವ್ಯವಸ್ಥೆಯನ್ನು ದಾಟಿ ಸಂಸತ್ ಭವನದೊಳಗೆ ಬಂದು ಅಧಿವೇಶನದಲ್ಲಿ ದಾಳಿ ಮಾಡುತ್ತಾರೆ ಎಂದರೆ ದೊಡ್ಡ ಪ್ರಮಾಣದಲ್ಲಿ ಭದ್ರತಾ ಲೋಪ ಆಗಿದೆ. ಇದರ ಹೊಣೆಯನ್ನು ಪ್ರಧಾನಿಯೇ ಹೊರಬೇಕು ತಾನೆ? ಎಂದು ಕೇಳಿದರು.
ಸಣ್ಣ ಕಾರಣಕ್ಕಾಗಿಯೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವ ಪ್ರಕರಣಗಳು ನಮ್ಮ ಮುಂದಿವೆ. ಇಷ್ಟು ದೊಡ್ಡ ವ್ಯವಸ್ಥೆಯ ಲೋಪವಾಗಿರುವ ಸಂದರ್ಭದಲ್ಲಿ ಅದನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ? ಎಂದು ಪ್ರಶ್ನಿಸಿದರು.