ಬೆಂಗಳೂರು:ಪತ್ರಿಕಾ ವಿತರಕರು ಶ್ರಮಜೀವಿಗಳಾಗಿದ್ದು, ಅವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಹೊಸದಾಗಿ ಯೋಜನೆ ರೂಪಿಸಿ, ಅಪಘಾತದಲ್ಲಿ ಮೃತಪಟ್ಟ ಪತ್ರಿಕಾ ವಿತರಕರಿಗೆ 2 ಲಕ್ಷ ವೈದ್ಯಕೀಯ ನೆರವಿಗೆ 1 ಲಕ್ಷ ರೂ ನೆರವಿನ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಪತ್ರಿಕಾ ವಿತರಕರ ಸಮಸ್ಯೆಗೆ ಸ್ಪಂಧಿಸಿ ಯೋಜನೆಯನ್ನು ಜಾರಿಗೊಳಿಸಿದ್ದಕ್ಕಾಗಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ) ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಅಸಂಘಟಿತ ವಲಯದಲ್ಲಿರುವ ಎಲ್ಲರಿಗೂ ಸಾಮಾಜಿಕ ಭದ್ರತೆ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದು, ಮೊದಲ ಹಂತವಾಗಿ ಪತ್ರಿಕಾ ವಿತರಕರಿಗೆ ಯೋಜನೆಯನ್ನು ಜಾರಿಗೆ ನೀಡಲಾಗಿದೆ ಎಂದರು.
ಸದುದ್ದೇಶಕ್ಕಾಗಿ ರೂಪಿಸಿರುವ ಯೋಜನೆ ದುರ್ಬಳಕೆ ಆಗಬಾರದು. ನಿಜವಾದ ಪತ್ರಿಕಾ ವಿತರಕರಿಗೆ ನೆರವಾಗುವಂತೆ ಮಾಡಲು ಸರ್ಕಾರ ನೀತಿ ನಿಯಮಾವಳಿ ರೂಪಿಸಲಿದ್ದು, ಅದಕ್ಕಾಗಿ ನಿಮ್ಮೆಲ್ಲರ ಸಹಕಾರವೂ ಮುಖ್ಯವಾಗಿದೆ ಎಂದರು.
ಯೋಜನೆಯನ್ನು ಜಾರಿಗೆ ನೀಡಲು ಸಿಎಂ ಸಿದ್ದರಾಮಯ್ಯ ಅವರ ಸಹಕಾರ ಕಾರಣ. ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಕಾಳಜಿ ವಹಿಸಿದ್ದರು ಎಂದರು.