ಹಿರಿಯ ನಟ ಅಂಬರೀಶ್ ಇಹಲೋಕ ತ್ಯಜಿಸಿ ಇಂದಿಗೆ ಐದು ವರ್ಷ. 5ನೇ ಪುಣ್ಯಸ್ಮರಣೆಯಂದು ಅವರ ಪುತ್ರ ನಟಿಸಿರುವ ಹೊಸ ಸಿನಿಮಾ ಬಿಡುಗಡೆಯಾಗಿದೆ.
ಕನ್ನಡ ಚಿತ್ರರಂಗದ ಜನಪ್ರಿಯ ನಟ, ಮಂಡ್ಯದ ಗಂಡು ಹಿರಿಮೆಯ ಡಾ.ಅಂಬರೀಶ್ ಕೊನೆಯುಸಿರೆಳೆದು ಇಂದಿಗೆ 5 ವರ್ಷವಾಗುತ್ತಿದೆ.
ಐದನೇ ವರ್ಷದ ಪುಣ್ಯಸ್ಮರಣೆಯ ಈ ದಿನ ಪುತ್ರ ಅಭಿಷೇಕ್ ಅಂಬರೀಶ್ ನಟಿಸಿರುವ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ತೆರೆಕಂಡಿದೆ. ಪತ್ನಿ ಸುಮಲತಾ ಅಂಬರೀಶ್ ಸೇರಿದಂತೆ ಗಣ್ಯರು ಅಂಬಿ ಅವರನ್ನು ಸ್ಮರಿಸಿ, ಭಾವುಕ ನುಡಿಗಳನ್ನಾಡಿದರು.
ಸುಮಲತಾ ಅಂಬರೀಶ್ ಮಾತನಾಡಿ, ”ನಮ್ಮ ನೆನಪುಗಳು, ಸುಖ-ದುಃಖ, ನಗು, ಕಣ್ಣೀರು ಸೇರಿದಂತೆ ಪ್ರತಿ ಕ್ಷಣವೂ ನೀವು ನಮ್ಮೊಂದಿಗಿದ್ದೀರಿ. ನಿಮ್ಮ ಸ್ಥಾನ ಅಳೆಯಲಾಗದು. ನಾನು ಪ್ರೀತಿಯನ್ನು ಹಿಡಿದಿಟ್ಟುಕೊಳ್ಳುತ್ತೇನೆ, ನಷ್ಟವನ್ನಲ್ಲ. ಅನೇಕರನ್ನು ತಲುಪಿದ ಜೀವ ಅಥವಾ ಜೀವನವನ್ನು ಎಂದಿಗೂ ಕಳೆದುಕೊಳ್ಳಲಾಗುವುದಿಲ್ಲ. ನೀವು ಎಂದೆಂದಿಗೂ ಶಾಶ್ವತ. ಒಂದು ಜೀವನ, ಒಂದು ಪ್ರಪಂಚಕ್ಕೂ ಮೀರಿದವರು. ನೀವು ಹೆಮ್ಮೆಯಿಂದ ನಗುತ್ತಿರುವಿರಿ ಮತ್ತು ಅಲ್ಲಿಂದಲೇ ನಮ್ಮ ಪುತ್ರನ ಸಿನಿಮಾಗೆ ಆಶೀರ್ವದಿಸುತ್ತೀರಿ ಎಂದು ನನಗೆ ನಂಬಿಕೆ ಇದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಬ್ಯಾಡ್ ಮ್ಯಾನರ್ಸ್’ ಬಿಡುಗಡೆ: ‘ಬ್ಯಾಡ್ ಮ್ಯಾನರ್ಸ್’ ಮೂರು ವರ್ಷಗಳ ಬ್ರೇಕ್‌ನ ಬಳಿಕ ಅಭಿಷೇಕ್ ಅಂಬರೀಶ್ ಅವರ ಮತ್ತೊಂದು ಸಿನಿಮಾ. ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಅಭಿಷೇಕ್ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ರಚಿತಾ ರಾಮ್ ನಾಯಕಿ. ಕೆ.ಎಂ.ಸುಧೀರ್ ನಿರ್ಮಾಣದ ‘ಬ್ಯಾಡ್ ಮ್ಯಾನರ್ಸ್’ ಪ್ರಮೋಶನ್ ಜೋರಾಗಿಯೇ ನಡೆಯುತ್ತಿದೆ.