ಬಳ್ಳಾರಿ ನ.11: ಬಳ್ಳಾರಿ (Bellari) ಜಿಲ್ಲೆ ಕಾಂಗ್ರೆಸ್ (Congress) ಹಿಡಿತದಲ್ಲಿದೆ. ಜಿಲ್ಲೆಯ ಐದೂ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇದೀಗ ಬಳ್ಳಾರಿ ಮಹಾನಗರ ಪಾಲಿಕೆ (Bellari City Corporation) ಮೇಯರ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಇದು “ಕೈ” ಗೆ ಪ್ರತಿಷ್ಠೆಯಾಗಿದೆ. ನ.28ರಂದು ಬಳ್ಳಾರಿ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ನಡೆಯಲಿದೆ. ರಾಜ್ಯದ ಕಿರಿಯ ಮೇಯರ್ ಹೆಗ್ಗಳಿಕೆಗೆ ಪಾತ್ರವಾಗಿದ್ದ 23 ವರ್ಷದ ಡಿ.ತ್ರಿವೇಣಿ ಏಳು ತಿಂಗಳು ಆಡಳಿತ ನಡೆಸಿ, ನವೆಂಬರ್ 4ರಂದು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನೂತನ ಮೇಯರ್, ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ.
ಮೇಯರ್ ಸ್ಥಾನ ಎಸ್ಸಿ ಸಮುದಾಯಕ್ಕೆ ಮೀಸಲಾಗಿದೆ. ಉಪಮೇಯರ್ ಸ್ಥಾನಕ್ಕೆ ಎಸ್ಟಿ (ಮಹಿಳೆ) ಮೀಸಲಾಗಿದೆ. ಪಾಲಿಕೆಯ 39 ವಾರ್ಡ್‌ಗಳ ಪೈಕಿ ಬಿಜೆಪಿಯ 13 ಜನ ಸದಸ್ಯರಿದ್ದರೇ, ಕಾಂಗ್ರೆಸ್ 21 ಜನ, ಐವರು ಪಕ್ಷೇತರ ಸದಸ್ಯರಿದ್ದಾರೆ. ಈ ಐವರು ಪಕ್ಷೇತರರು ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.