ಬೆಂಗಳೂರು: ” ಗ್ಯಾರಂಟಿಗಳು ಜನರಿಗೆ ತಲುಪುತ್ತಲೇ ಇಲ್ಲ. ಸರ್ಕಾರದ ನುಡಿದಂತೆ ನಡೆಯುತ್ತಿಲ್ಲ” ಎಂದು ಪ್ರತಿಪಕ್ಷಗಳ ಆರೋಪದ ಬೆನ್ನಲ್ಲೇ ನಾಲ್ಕೂ ಯೋಜನೆಗಳ ಇಲಾಖೆಗಳ ಅಧಿಕಾರಿಗಳ ಜತೆಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಸಭೆ ನಡೆಸಿದ್ದಾರೆ.
ಯಾರೊಬ್ಬ ಫಲಾನುಭವಿಯೂ “ಗ್ಯಾರಂಟಿ’ಗಳಿಂದ ವಂಚಿತವಾಗಬಾರದು. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೂ ಬಗೆಹರಿಸಿ, ಸೌಲಭ್ಯ ತಲುಪುವಂತೆ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಗೃಹಲಕ್ಷ್ಮೀ ಸೇರಿದಂತೆ ನಾಲ್ಕೂ ಯೋಜನೆಗಳಿಗೆ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲವು ಯೋಜನೆಗಳು ಸಂಪೂರ್ಣವಾಗಿ ಫಲಾನುಭವಿಗಳಿಗೆ ತಲುಪಲು ಡಿಸೆಂಬರ್ ಗಡುವು ವಿಧಿಸಿದರು. ಉಳಿದ ಯೋಜನೆಗಳಲ್ಲಿ ಮತ್ತಷ್ಟು ಸುಧಾರಣಾ ಕ್ರಮಗಳಿಗೆ ಸೂಚಿಸಿದರು.
ವಿಶೇಷವಾಗಿ “ಗೃಹಲಕ್ಷ್ಮೀ’ಯಲ್ಲಿ ಖಾತೆ ಮಾಹಿತಿಯಲ್ಲಿ ಗೊಂದಲ, ಆಧಾರ್ ಲಿಂಕ್ ಆಗದಿರುವುದು ಒಳಗೊಂಡಂತೆ ಹಲವು ಕಾರಣಗಳಿಂದ ನಗದು ವರ್ಗಾವಣೆ ತೊಡಕಾಗಿದೆ. ಡಿಸೆಂಬರ್ ಒಳಗೆ ಸಮಸ್ಯೆಗಳು ಬಗೆಹರಿದು, ಎಲ್ಲ ಅರ್ಹ ಫಲಾನುಭವಿಗಳ ಖಾತೆಗೆ ನಗದು ಜಮೆ ಆಗಬೇಕು. ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳತಕ್ಕದ್ದು’ ಎಂದು ನಿರ್ದೇಶನ ನೀಡಿದರು.