ಬೆಂಗಳೂರು : ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಲ್ಲಿ ಹಿಂದೂಗಳು ಬದುಕುವುದು ಕಷ್ಟ ಎಂದು ಹೇಳಿಕೆ ನೀಡುವ ಮೂಲಕ ಎರಡು ಸಮುದಾಯಗಳ ನಡುವೆ ದ್ವೇಷ ಭಾವನೆ ಮೂಡುವಂತೆ ಮಾಡಿದ ಆರೋಪದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ.
ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ಚಕ್ರವರ್ತಿ ಸೂಲಿಬೆಲೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ಧಾರವಾಡ ನ್ಯಾಯಪೀಠ ಎಫ್ಐಆರ್ಗೆ ತಡೆ ನೀಡಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ‘ಅರ್ಜಿದಾರರು ಯಾವುದೇ ದುರುದ್ದೇಶ ಪೂರ್ವಕವಾಗಿ ಹೇಳಿಕೆ ನೀಡಿಲ್ಲ. ಅಲ್ಲದೆ, ದಾಖಲಿಸಿರುವ ದೂರು ಸ್ವಯಂಪ್ರೇರಿತವಾಗಿದ್ದು, ರಾಜಕೀಯ ಉದ್ದೇಶದಿಂದ ಕೂಡಿದೆ. ಈ ರೀತಿಯಲ್ಲಿ ದೂರು ದಾಖಲಿಸುವುದು ವಾಕ್ ಸ್ವಾತಂತ್ರವನ್ನು ಹತ್ತಿಕ್ಕಿದಂತಾಗಲಿದೆ. ಆದ್ದರಿಂದ ತನಿಖೆಗೆ ತಡೆ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಕೋರಿದರು.
ಪ್ರಕರಣದ ಹಿನ್ನೆಲೆ ಏನು? : ಅಕ್ಟೋಬರ್ 3 ರಂದು ಕಾರವಾರದ ಕಡವಾಡದ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಚಕ್ರವರ್ತಿ ಸೂಲಿಬೆಲೆ ಮಾಧ್ಯಮಗೋಷ್ಟಿ ನಡೆಸಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದೂಗಳು ತೊಂದರೆ ಅನುಭವಿಸುವಂತಾಗಿದೆ ಮತ್ತು ಸಿದ್ದರಾಮಯ್ಯ ಅವರು ಮುಸ್ಲಿಮರನ್ನು ಬೆಂಬಲಿಸುವವರೆಗೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ಎಂದಿದ್ದಾರೆ. ಈ ಸಂಬಂಧ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷ ಹುಟ್ಟುಹಾಕಲು ಪ್ರಯತ್ನಿಸಿದ್ದಾರೆ ಎಂದು ಕಾರವಾರ ಗ್ರಾಮಾಂತರ ಠಾಣೆಯ ಗುಪ್ತಚರ ವಿಭಾಗದ ಪೊಲೀಸರು ದೂರು ದಾಖಲಿಸಿದ್ದರು.