ಬೆಂಗಳೂರು: ವಯಸ್ಸಾದ ಪೋಷಕರನ್ನು ಸಂಧ್ಯಾಕಾಲದಲ್ಲಿ ಅವರ ಆರೈಕೆ ಮಾಡುವ ಜವಾಬ್ದಾರಿ ಕಾನೂನು, ಧರ್ಮ ಮತ್ತು ನೈತಿಕತೆಯು ಮಕ್ಕಳ ಮೇಲಿರುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತಂದೆಯಿಂದ ಆಸ್ತಿಯನ್ನು ಉಡುಗೊರೆಯಾಗಿ ಪಡೆದ ನಂತರ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದ ಪುತ್ರಿ ಮತ್ತು ಅಳಿಯನ ವರ್ತನೆ ಗಮನಿಸಿ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಪೋಷಕರು ಆಸ್ತಿಯನ್ನು ಉಡುಗೊರೆಯಾಗಿ ನೀಡಿದಾಗ ಈ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಆದೇಶಿಸಿದೆ.
ಅಲ್ಲದೆ, ತಂದೆಯಿಂದ ಆಸ್ತಿಯನ್ನು ಗಿಫ್ಟ್ ಡೀಡ್ (ಉಡುಗೊರೆ ಕ್ರಯ) ಆಗಿ ಪಡೆದಿರುವುದನ್ನು ಅಮಾನ್ಯಗೊಳಿಸಿದ್ದ ತುಮಕೂರು ವಲಯದ ಪೋಷಕರ ಕಲ್ಯಾಣ ಮತ್ತು ಹಿರಿಯ ನಾಗರಿಕರ ನಿರ್ವಹಣೆ ಕಾಯ್ದೆಯಡಿಯ ನ್ಯಾಯಾಧಿಕರಣದ ವಿಭಾಗಾಧಿಕಾರಿಯ ಆದೇಶ ಮತ್ತು ಅದನ್ನು ಎತ್ತಿಹಿಡಿದಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ತೀರ್ಪನ್ನು ವಿಭಾಗೀಯ ಪೀಠ ಪುರಸ್ಕರಿಸಿದೆ.
ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಹೊಣೆಗಾರಿಕೆಯಾಗಿದೆಯೇ ಹೊರತು ದಯೆ-ದಾನದ ವಿಚಾರವಲ್ಲ, ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ಆರೈಕೆ ಮಾಡುವುದು ಮಕ್ಕಳ ಶಾಸನಬದ್ಧ ಜವಾಬ್ದಾರಿ. ‘ರಕ್ಷಂತಿ ಸ್ಥವಿರೇ ಪುತ್ರಃ’ ಎಂದು ಸಹಸ್ರಾರು ವರ್ಷಗಳಿಂದ ಈ ದೇಶದ ಧರ್ಮಗ್ರಂಥಗಳು ಸಾರುತ್ತವೆ. ಜೀವನ ಸಂಧ್ಯಾಕಾಲದಲ್ಲಿರುವ ತಂದೆ-ತಾಯಿಯನ್ನು ಮಕ್ಕಳು ನೋಡಿಕೊಳ್ಳುವುದೇ ಧರ್ಮ ಎನ್ನುವುದೇ ಅದರ ಅರ್ಥ ಎಂದು ನ್ಯಾಯಪೀಠ ತಿಳಿಸಿದೆ.
Laxmi News 24×7