ಹಾವೇರಿ : ಜಿಲ್ಲೆಯ ಅನ್ನದಾತರ ಗೋಳು ಕೇಳುವವರಿಲ್ಲದಂತಾಗಿದೆ. ಅನಾವೃಷ್ಠಿಯಿಂದ ಬೆಳೆಗಳು ಹಾಳಾಗಿದ್ದು, ರೈತರು ಅವುಗಳನ್ನ ಹರಗಿ ನಾಶಪಡಿಸುತ್ತಿದ್ದಾರೆ. ಇತ್ತ ಕೆಲ ರೈತರು ಕಬ್ಬನ್ನೇ ನಂಬಿದ್ದು ಮುಂಗಾರು ಕೈಕೊಟ್ಟಿದ್ದರಿಂದ ಕಬ್ಬು ಸಹ ನಿರೀಕ್ಷಿಸಿದ ಪ್ರಮಾಣದಲ್ಲಿ ಇಳುವರಿ ಬರದಂತಾಗಿದೆ.
ಜಿಲ್ಲೆಯಲ್ಲಿ ಎರಡು ಸಕ್ಕರೆ ಕಾರ್ಖಾನೆಗಳಿದ್ದು, ಶಿಗ್ಗಾಂವಿ ತಾಲೂಕು ಕೋಣನಕೆರೆ ಬಳಿ ಇರುವ ಸಕ್ಕರೆ ಕಾರ್ಖಾನೆಯಲ್ಲಿ ಈಗಾಗಲೇ ಟನ್ ಕಬ್ಬಿಗೆ 3070 ರೂಪಾಯಿ ನಿಗದಿ ಮಾಡಿದೆ. ಆದರೆ, ತಮ್ಮ ಕಬ್ಬಿಗೆ ಕನಿಷ್ಠ ಟನ್‌ಗೆ 3500 ರೂಪಾಯಿ ಹಣ ನೀಡುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಹಾವೇರಿ ಜಿಲ್ಲಾಧ್ಯಕ್ಷ ಭುವನೇಶ್ವರ ಒತ್ತಾಯಿಸಿದ್ದಾರೆ. ಕಬ್ಬು ಮಳೆಯಿಲ್ಲದಿರುವುದರಿಂದ ನಿರೀಕ್ಷೆ ಮಾಡಿದಷ್ಟು ಇಳುವರಿ ಬರುವುದಿಲ್ಲ. ಬಂದ ಬೆಳೆಗೆ ಸಹ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕು ಗೌರವಾಧ್ಯಕ್ಷ ಸುರೇಶ ಚಲವಾದಿ ಕೋಣನಕೆರೆಯಲ್ಲಿರುವ ವಿಐಎನ್‌ಪಿ ಸಕ್ಕರೆ ಕಾರ್ಖಾನೆ ಮಾಜಿ ಸಚಿವ ಶಿವರಾಮ ಹೆಬ್ಬಾರ್ ಪುತ್ರ ವಿವೇಕ ಅವರ ಒಡೆತನದಲ್ಲಿದೆ. ಈ ಕಾರ್ಖಾನೆಯಲ್ಲಿ ಸಕ್ಕರೆ ಉತ್ಪಾದಿಸುವ ಜೊತೆಗೆ ಇಥೆನಾಲ್ ಸಹ ಉತ್ಪಾದಿಸಲಾಗುತ್ತದೆ. ಮಾಜಿ ಸಚಿವ ಶಿವರಾಮ ಹೆಬ್ಬಾರ್ ಪುತ್ರ ವಿವೇಕ್ ಕಬ್ಬು ಬೆಳೆಗಾರರ ಸಭೆ ಕರೆಯದೆ, ಅಧಿಕಾರಿಗಳ ಜೊತೆ ಚರ್ಚಿಸದೆ, ಅವೈಜ್ಞಾನಿಕವಾಗಿ ಕಬ್ಬಿನ ದರ ನಿಗದಿ ಮಾಡಿದ್ದಾರೆ. ಈ ಕೂಡಲೇ ವಿವೇಕ್ ಕಬ್ಬಿನ ದರ ಪ್ರತಿಟನ್‌ಗೆ 3500 ನಿಗದಿ ಮಾಡಬೇಕು ಎಂದು ಭುವನೇಶ್ವರ್ ಒತ್ತಾಯಿಸಿದರು. 3500 ರೂಪಾಯ ದರ ನಿಗದಿ ಮಾಡುವವರೆಗೊ ಕಬ್ಬು ಬೆಳೆಗಾರರು ವಿವೇಕ್ ಹೆಬ್ಬಾರ್ ಒಡೆತನದ ಕೋಣನಕೆರೆ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸದಂತೆ ಎಚ್ಚರಿಕೆ ನೀಡಿದ್ದಾರೆ.