ಮಂಡ್ಯ :ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೃಷ್ಣರಾಜಪೇಟೆ ತಾಲ್ಲೂಕಿನ 16 ಹೋಂ ಕ್ವಾರಂಟೈನ್ ಸೆಂಟರ್ ಗಳಲ್ಲಿರುವ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ಹಾಲು ವಿತರಣೆ ಮಾಡಿದ ತಹಶೀಲ್ದಾರ್ ಎಂ.ಶಿವಮೂರ್ತಿ.
ಮಕ್ಕಳಿಗೆ ನಂದಿನಿ ಬ್ರಾಂಡ್ ನ ಸುವಾಸಿತ ಬಾದಾಮಿ ಹಾಲಿನ ಪ್ಯಾಕೇಟ್ ಗಳು ಮತ್ತು ಗರ್ಭಿಣಿ ಮಹಿಳೆಯರಿಗೆ ಟೆಟ್ರಾ ಪ್ಯಾಕ್ ನಂದಿನಿ ವಿಶೇಷ ಹಾಲಿನ ಪ್ಯಾಕೇಟುಗಳನ್ನು ವಿತರಿಸಿ ಕ್ವಾರಂಟೈನ್ ಸೆಂಟರ್ ಗಳಲ್ಲಿರುವ ಮುಂಬೈ ಕನ್ನಡಿಗ ಬಂಧುಗಳ ಯೋಗಕ್ಷೇಮವನ್ನು ತಹಶೀಲ್ದಾರ್ ಶಿವಮೂರ್ತಿ ವಿಚಾರಿಸಿ ಕುಂದುಕೊರತೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿದರು.
ಕ್ವಾರಂಟೈನ್ ಕೇಂದ್ರಗಳಿಗೆ ಗುಣ ಮಟ್ಟದ ಊಟ ಹಾಗೂ ತಿಂಡಿ ತಿನಿಸುಗಳನ್ನು ಸರಬರಾಜು ಮಾಡಲಾಗುತ್ತಿದೆ. ಕ್ವಾರಂಟೈನ್ ಸೆಂಟರ್ ಗಳ ಸ್ವಚ್ಛತೆ ಹಾಗೂ ಗುಣಮಟ್ಟವು ಅತ್ಯುತ್ತಮವಾಗಿದೆ ಎಂದು ಕ್ವಾರಂಟೈನ್ ಕೇಂದ್ರದಲ್ಲಿರುವ ಮಹಿಳೆಯರು, ಮಕ್ಕಳು ಹಾಗೂ ಪುರುಷರು ಮೆಚ್ಚುಗೆ ವ್ಯಕ್ತಪಡಿಸಿ ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಕೃತಜ್ಞತೆಯನ್ನು ಸಮರ್ಪಿಸಿದರು.
ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ಗ್ರಾಮಭಾರತಿ ಸಮೂಹ ಶಿಕ್ಷಣ ಸಂಸ್ಥೆ, ಜಯಮ್ಮ ಶಿವಲಿಂಗೇಗೌಡ ಕಲ್ಯಾಣ ಮಂಟಪ, ಸ್ಕೂಲ್ ಆಫ್ ಇಂಡಿಯಾ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸರ್ಕಾರಿ ಐಟಿಐ ಕಾಲೇಜುಗಳಲ್ಲಿ ಸ್ಥಾಪಿಸಿರುವ ಕ್ವಾರಂಟೈನ್ ಸೆಂಟರ್ ಗಳಿಗೆ ಭೇಟಿ ನೀಡಿದ ತಹಶೀಲ್ದಾರ್ ಶಿವಮೂರ್ತಿ, ತಾಲ್ಲೂಕು ಸಮಾಜಕಲ್ಯಾಣ ಅಧಿಕಾರಿ ಡಾ.ಮನುಕುಮಾರ್, ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಆರೋಗ್ಯ ಪರಿವೀಕ್ಷಕ ಅಶೋಕ್, ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ತೋಟಗಾರಿಕೆ ಅಧಿಕಾರಿ ಜಯರಾಮು ಕ್ವಾರಂಟೈನ್ ಸೆಂಟರ್ ಗಳ ಸ್ವಚ್ಛತೆಯ ಕಡೆ ಗಮನ ಹರಿಸಿ, ಕ್ವಾರಂಟೈನ್ ಕೇಂದ್ರಗಳಲ್ಲಿರುವ ಜನರು ವಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡು ಕೊರೋನಾ ಯುದ್ಧದಲ್ಲಿ ಗೆದ್ದು ಬರುವಂತೆ ಶುಭ ಹಾರೈಸಿದರು.
