ಹುಬ್ಬಳ್ಳಿ: ಸಚಿವ ಜಿ. ಪರಮೇಶ್ವರ್ ಮುಖ್ಯಮಂತ್ರಿ, ಸತೀಶ್ ಜಾರಕಿಹೊಳಿ ಉಪಮುಖ್ಯಮಂತ್ರಿ ಆಗಬೇಕೆಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಸಾಂದರ್ಭಿಕವಾಗಿ ಹೇಳಿರಬಹುದು.
ಆದರೆ ಮುಂದೊಂದು ದಿನ ದಲಿತರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ಅದಕ್ಕೆ ಕಾಯಬೇಕಷ್ಟೇ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ಅವರು ಒಳ್ಳೆಯ ದೃಷ್ಟಿಯಿಂದ ಹೇಳಿದ್ದಾರೆ. ಹೇಳಿದ ತಕ್ಷಣ ಯಾವುದು ಆಗೋದಿಲ್ಲ. ಈ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಸದ್ಯ ರಾಜ್ಯದಲ್ಲಿ ಒಬ್ಬರು ಮುಖ್ಯಮಂತ್ರಿಗಳಿದ್ದಾರೆ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಚರ್ಚೆ ಅಗತ್ಯವಿಲ್ಲ. ಯಾರೇ ಮುಖ್ಯಮಂತ್ರಿ ಇದ್ದಾಗಲೂ ಈ ತರಹ ಮಾತುಗಳು ಕೇಳಿ ಬರುತ್ತದೆ ಎಂದರು.
ಸಚಿವ ಡಿ.ಸುಧಾಕರ್ ಅವರ ಮೇಲೆ ದಾಖಲಾದ ಎಫ್‌ಐಆರ್ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಎಲ್ಲರಿಗೂ ಸಮಾನ ಕಾನೂನು ಇದೆ. ಕಾನೂನು ಅಡಿಯಲ್ಲಿ ಕ್ರಮ ಆಗುತ್ತದೆ. ಎಲ್ಲದಕ್ಕೂ ರಾಜೀನಾಮೆ ಕೊಡಬೇಕು ಎಂದೇನಿಲ್ಲ. ಸಮಸ್ಯೆ ಗಂಭೀರತೆ ಮೇಲೆ ರಾಜೀನಾಮೆ ನೀಡಲಾಗುತ್ತದೆ. ಅದರಂತೆ ಸದ್ಯದ ಪ್ರಕರಣ ಗಂಭೀರವಾಗಿದ್ದರೆ ರಾಜೀನಾಮೆ ಕೊಡಬಹುದು ಎಂದರು.
ಮಹದಾಯಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಜ್ಯಕ್ಕೆ ಕೇಂದ್ರದಿಂದ ಫಾರೆಸ್ಟ್ ಕ್ಲಿಯರೆನ್ಸ್ ಸಿಕ್ಕಿಲ್ಲ. ಅದು ಬಂದ ತಕ್ಷಣ ರಾಜ್ಯ ಸರ್ಕಾರ ಸಮರ್ಥವಾಗಿದ್ದು, ಯೋಜನೆ ಆರಂಭಿಸಲಾಗುವುದು ಎಂದರು. ಇನ್ನು ಬೆಳಗಾವಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಈಗಾಗಲೇ ಕ್ಷೇತ್ರದಲ್ಲಿ ಚರ್ಚೆ ಆರಂಭವಾಗಿದೆ. ಅಂತಿಮವಾಗಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.