ಕಲಬುರಗಿ: ಕ್ವಾರಂಟೈನ್ ಕೇಂದ್ರದಲ್ಲಿದ್ದ ವ್ಯಕ್ತಿಯೊಬ್ಬ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಿಣ್ಣಿ ಅಬ್ಬಾಸ್ ಗ್ರಾಮದಲ್ಲಿ ನಡೆದಿದೆ.
ರೇಣುಕಾ ಕುಡಕಿ ಗಾಯಗೊಂಡ ಆಶಾ ಕಾರ್ಯಕರ್ತೆಯಾಗಿದ್ದು ಇವರ ಮೇಲೆ ಸೋಮನಾಥ್ ಕಾಂಬಳೆ ಹಲ್ಲೆ ಮಾಡಿದ್ದಾನೆ. ಚಿಕನ್ ಊಟ ಕೊಡದಿದ್ದಕ್ಕೆ ಸಿಟ್ಟಿಗೆದ್ದ ಸೋಮನಾಥ್, ಆಶಾ ಕಾರ್ಯಕರ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪರಿಣಾಮ ರೇಣುಕಾ ಅವರ ಕೈ ಮುರಿದು ಆಳಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂಬೈನಿಂದ ಬಂದಿದ್ದ ಸೋಮನಾಥ್ ನನ್ನು ರೇಣುಕಾ ಗ್ರಾಮದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಿದ್ದರು. ಹೀಗೆ ಕ್ವಾರಂಟೈನ್ ಕೇಂದ್ರದಲ್ಲಿದ್ದ ಭೂಪ, ಊಟಕ್ಕೆ ಚಿಕನ್ ಬೇಕು, ಮಕ್ಕಳಿಗೆ ಚಿಪ್ಸ್ ಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಆಶಾಕಾರ್ಯಕರ್ತೆ ರೇಣುಕಾ, ಆಹಾರ ಸರಬರಾಜು ನನ್ನಿಂದ ಆಗಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಸೋಮನಾಥ್, ರೇಣುಕಾ ಮೇಲೆ ಹಲ್ಲೆ ಮಾಡಿದ್ದಾನೆ.
ಸೋಮನಾಥ್ ಹೆಂಡತಿ ಸೇರಿ ಕುಟುಂಬದ ಐವರು ಸದಸ್ಯರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸೋಮನಾಥ್ ಸೇರಿ ಐವರ ಮೇಲೆ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.