ಬಾಗಲಕೋಟೆ : ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ಆರಾಮಾಗಿ ಜೀವನ ಕಳೆಯಬೇಕು ಎನ್ನುವರು ಹೆಚ್ಚಾಗಿ ಇರುತ್ತಾರೆ.
ಆದರೆ ಇಲ್ಲೊಬ್ಬರು ನಿವೃತ್ತರಾದ ಬಳಿಕ ರೈತರಾಗಿ ಮತ್ತೆ ತಮ್ಮ ಹೊಸ ಜೀವನ ಸಾಗಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಜಮೀನಿಗೆ ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು ಎಂದು ರೈತರಿಗೆ ಜಾಗೃತಿ ಮೂಡಿಸುವ ಜೊತೆಗೆ ಉಚಿತ ಸಾವಯವ ಗೊಬ್ಬರ ವಿತರಣೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಶ್ರೀಶೈಲ ಕೂಗಲಿ ಎಂಬ ಇವರು ಮೊದಲು ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. 17 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಸೇನಾ ಖೋಟಾದಲ್ಲಿ ಪೊಲೀಸ್ ಇಲಾಖೆಯಲ್ಲಿ ತಮ್ಮ ಸೇವೆ ಮುಂದುವರೆಸಿದ್ದಾರೆ. ನಂತರ 23 ವರ್ಷ ಪೊಲೀಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿ, ನಿವೃತ್ತರಾದ ಬಳಿಕ ಈಗ ರೈತರಾಗಿದ್ದಾರೆ. ಬಾಗಲಕೋಟೆ ನಗರದ ನಿವಾಸಿಯಾಗಿರುವ ಇವರು ಅನಗವಾಡಿ ಪುನರ್ವಸತಿ ಕೇಂದ್ರದ ಬಳಿ ಸುಮಾರು 8 ಎಕರೆ ಜಮೀನು ಹೊಂದಿದ್ದಾರೆ. ಈ ಜಮೀನಿನಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ತಮ್ಮ ತೋಟದಲ್ಲಿ ಸ್ವತಃ ತಯಾರು ಮಾಡಿರುವ ಸಾವಯವ ಗೊಬ್ಬರ ಬಳಕೆ ಮಾಡಿಕೊಂಡು ಗುಣಮಟ್ಟದ ಫಸಲು ತೆಗೆಯುತ್ತಿದ್ದಾರೆ.
ತಮ್ಮ ಜಮೀನಿನಲ್ಲಿ ಕೃಷಿ ಕುಟೀರ ಎಂದು ನಿರ್ಮಾಣ ಮಾಡಿ, ವಿವಿಧ ಬಗೆಯ ಸಾವಯವ ಗೊಬ್ಬರ ತಯಾರಿಸಿ, ಜಮೀನಿಗೆ ಬಳಕೆ ಮಾಡುತ್ತಿದ್ದಾರೆ. ಗೋಕೃಪಾಮೃತ ಎಂದು ಗೋವಿನ ಮೂತ್ರ ಮತ್ತು ಸಗಣಿಯಿಂದ ತಯಾರಿಸಿ ಈ ಸಾವಯವ ಗೊಬ್ಬರವನ್ನು ಜಮೀನಿಗೆ ಬಳಕೆ ಮಾಡುತ್ತಾರೆ. ಇದರ ಜೊತೆಗೆ ವೀಕ್ಷಣೆ ಮಾಡಲು ಬಂದ ರೈತರಿಗೆ ಉಚಿತವಾಗಿ ಒಂದು ಬಾಟಲ್ನಲ್ಲಿ ಕೊಟ್ಟು ಕಳಿಸುತ್ತಾರೆ. ಅಲ್ಲದೇ ತಮ್ಮ ಜಮೀನಿಗೆ ಬಳಕೆ ಮಾಡುವಂತೆ ಜಾಗೃತಿ ಮೂಡಿಸುತ್ತಾರೆ. ಇದರ ಜೊತೆಗೆ ಮಜ್ಜಿಗೆ, ಬೆಲ್ಲ, ಮೊಸರು ಕೊಳೆಯಲು ಬಿಟ್ಟು ಅದರಿಂದ ತಯಾರಾಗುವ ಪದಾರ್ಥ, ಬಿಲ್ವಪತ್ರೆ ಕಾಯಿ, ಎಲೆಯಿಂದ ತಯಾರಿಸಿದ ಗೊಬ್ಬರ ಹಾಗೂ ವೇಸ್ಟ್ ಡಿಕಾಂಪೋಸರ್, ಸಸ್ಯ ಲೋಕದ ಜೀವಾಮೃತ, ಇದು ಹೇಗೆ ತಯಾರಿಸಲಾಗುತ್ತದೆ ಎಂಬ ಮಾಹಿತಿ ಸಹ ಇಡಲಾಗಿದೆ.
Laxmi News 24×7