Breaking News

ಬೊಮ್ಮಾಯಿ ಸರ್ಕಾರ ₹1.5 ಲಕ್ಷ ಕೋಟಿ ಮೌಲ್ಯದ ಟೆಂಡರ್​ ಕರೆದು ಕಿಕ್‌ಬ್ಯಾಕ್ ಪಡೆದಿತ್ತು- ಹೆಚ್.ವಿಶ್ವನಾಥ್

Spread the love

ಬೆಳಗಾವಿ : “ವಿಧಾನಸಭೆ ಚುನಾವಣೆಗೂ ಮುನ್ನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದೂವರೆ ಲಕ್ಷ ಕೋಟಿ ರೂಪಾಯಿ ಮೌಲ್ಯದ ಟೆಂಡರ್ ಕರೆದು ಕಿಕ್ ಬ್ಯಾಕ್ ತೆಗೆದುಕೊಂಡಿದೆ” ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ ಗಂಭೀರ ಆರೋಪ ಮಾಡಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರಿಂದ ಕಮಿಷನ್ ಆರೋಪದ ಬಗ್ಗೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ಮಾತನಾಡುವುದು ಸುಲಭ, ಮಾತನಾಡುವವನು ಸತ್ಯವಂತನಿರಬೇಕು. ಇಡೀ ದೇಶ, ರಾಜ್ಯದಲ್ಲಿ ನೀ ಕಳ್ಳ, ನೀ ಕಳ್ಳ ಎನ್ನುತ್ತಾರೆ. ಆದರೆ ಯಾರು ಕಳ್ಳ ಎಂದು ಜನ ತೀರ್ಮಾನ ಮಾಡುತ್ತಾರೆ. ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ, ಜನರ ತೀರ್ಮಾನಕ್ಕೆ ಗೌರವ ಕೊಟ್ಟು ಕಾಂಗ್ರೆಸ್ ಸರ್ಕಾರಕ್ಕೆ ಕೆಲಸ ಮಾಡಲು ಅವಕಾಶ ನೀಡಬೇಕು” ಎಂದು ಹೇಳಿದರು.

ಬಿಜೆಪಿಗೆ ಕರ್ನಾಟಕದಲ್ಲಿ‌ ಭವಿಷ್ಯವಿಲ್ಲ: ಬೆಳಗಾವಿ ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ ಮತ್ತು ಇತರರೊಡನೆ ಪೈಪೋಟಿ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, “ಪಾಪ, ರಮೇಶ್ ‌ಜಾರಕಿಹೊಳಿ ನನ್ನ ಸ್ನೇಹಿತ. ಏನೋ ಆಗಿ ಮಂತ್ರಿಯಾದರು. ಹಲವು ಕಾರಣಕ್ಕೆ ಮಂತ್ರಿ ಸ್ಥಾನವೂ ಹೋಯಿತು. ರಾಜ್ಯದಲ್ಲಿ ಬಿಜೆಪಿ ಎಂದಾದರೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದೆಯೇ?, ಒಂದು ಸಲ ಕುಮಾರಸ್ವಾಮಿ ಹೆಗಲ ಮೇಲೆ, ಇನ್ನೊಂದು ಸಲ ನಮ್ಮ ಹೆಗಲ ಮೇಲೆ ಕುಳಿತು ಅಧಿಕಾರಕ್ಕೆ ಬಂದರು. ಈಗ ಪೂರ್ತಿಯಾಗಿ ಬಿದ್ದೇ ಹೋದರು. ಬಿಜೆಪಿಗೆ ಕರ್ನಾಟಕದಲ್ಲಿ ಅವಕಾಶ ಇಲ್ಲವೇ ಇಲ್ಲ, ಭವಿಷ್ಯವೂ ಇಲ್ಲ. ಅವರ ನಡವಳಿಕೆ, ನಡೆಸಿದ ಆಡಳಿತಕ್ಕೆ ಜನರು ರೋಸಿ ಹೋಗಿದ್ದಾರೆ.‌ ಇನ್ನು ರಮೇಶ್ ಜಾರಕಿಹೊಳಿ ಚೆನ್ನಾಗಿರಪ್ಪ, ಸ್ವಲ್ಪ ಬುದ್ಧಿ ಕಲಿತುಕೊಂಡು ಹೋಗಪ್ಪಾ” ಎಂದು ವಿಶ್ವನಾಥ್ ವ್ಯಂಗ್ಯವಾಡಿದರು.

ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವನಾಥ್​, “ಕಮಿಷನ್ ತೆಗೆದುಕೊಂಡಿದಕ್ಕೇ ನೀವು ಮನೆ ಸೇರಿರುವುದು. ವಿಧಾನಸಭೆ ಚುನಾವಣೆಯಲ್ಲಿ ಏಕೆ ಗೆಲ್ಲಲಿಲ್ಲ‌? ಏನೇನು ತೆಗೆದುಕೊಂಡಿರಿ ಎಂದು ನಿಮ್ಮ ಪಕ್ಕದಲ್ಲಿದ್ದವರೇ ಹೇಳಿದ್ದಾರೆ. ರವಿ ಈ ರಾಜ್ಯದ ಮಂತ್ರಿ ಆಗಿದ್ದವರು. ಮಾತನಾಡಬೇಕಂತ ಏನೇನೋ ಹೇಳಬಾರದು. ನೀವೇನೂ ಸತ್ಯಹರಿಶ್ಚಂದ್ರರೇ? ರಾಜಕಾರಣದಲ್ಲಿ ಸತ್ಯಹರಿಶ್ಚಂದ್ರರು ಎಲ್ಲೂ ಸಿಗಲ್ಲ. ರಾಜಕಾರಣ, ಮಾಧ್ಯಮ, ಕೈಗಾರಿಕೆ ಕ್ಷೇತ್ರ ಸೇರಿ ಎಲ್ಲೂ ಸತ್ಯಹರಿಶ್ಚಂದ್ರರು ಇಲ್ಲ” ಎಂದರು.

 


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ