ಬೆಂಗಳೂರು : ಆಗಸ್ಟ್ 15 ರ ನಂತರ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಮತ್ತು ಉಭಯ ಸದನಗಳ ಪ್ರತಿಪಕ್ಷಗಳ ನಾಯಕರ ಆಯ್ಕೆ ಪ್ರಕ್ರಿಯೆ ನಡೆಸುವುದಾಗಿ ಹೈಕಮಾಂಡ್ ನಾಯಕರು ಭರವಸೆ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಮೂರು ದಿನಗಳ ನವದೆಹಲಿ ಪ್ರವಾಸ ಮುಗಿಸಿ ವಾಪಸಾದ ನಂತರ ಆರ್.ಟಿ ನಗರದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸಂಸದರು ಅಧಿವೇಶನ ನಡೆಯುವಾಗ ಬರುವಂತೆ ಮನವಿ ಮಾಡಿದ್ದರು. ಅದಕ್ಕಾಗಿ ದೆಹಲಿಗೆ ಹೋಗಿದ್ದೆ. ಈ ವೇಳೆ ನಮ್ಮ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಗೆ ಸಮಯ ಕೇಳಿದ್ದೆ. ಭೇಟಿ ಆದ ಸಂದರ್ಭದಲ್ಲಿ ಪ್ರಸ್ತುತ ಕರ್ನಾಟಕದಲ್ಲಿ ಫಲಿತಾಂಶದ ನಂತರದ ಬೆಳವಣಿಗೆಗಳು ಮತ್ತು ಇಂದು ರಾಜ್ಯ ರಾಜಕಾರಣದಲ್ಲಿ ಏನು ನಡೆಯುತ್ತಿದೆ ಎನ್ನುವ ವಿಚಾರದ ಕುರಿತು ಚರ್ಚಿಸಲಾಯಿತು. ಒಟ್ಟಾರೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಭ್ರಷ್ಟಾಚಾರ, ರಾಜಕೀಯ ಬೆಳವಣಿಗೆ, ಜನರ ನಡುವೆ ಸರ್ಕಾರದ ಬಗ್ಗೆ ಇರುವ ಭಾವನೆ ಕುರಿತು ಹೇಳಿದ್ದೇನೆ ಎಂದರು.
ಇದರ ಜೊತೆ ಲೋಕಸಭಾ ಚುನಾವಣಾ ಸಿದ್ಧತೆ ಕುರಿತು ಮಾತುಕತೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆ ಹಾಗೂ ನೂತನ ರಾಜ್ಯಾಧ್ಯಕ್ಷರ ನೇಮಕದ ವಿಚಾರವೂ ಚರ್ಚೆಗೆ ಬಂತು. ಸದ್ಯ ಲೋಕಸಭೆ ಅಧಿವೇಶನ ನಡೆಯುತ್ತಿದೆ. ಅಧಿವೇಶನ ಮುಗಿಯಲಿ, ಆಗಸ್ಟ್ 15 ರ ನಂತರ ಈ ವಿಚಾರದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಭ್ರಷ್ಟಾಚಾರ ಆರೋಪದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟ : ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಿನಲ್ಲೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇವರ ಭ್ರಷ್ಟಾಚಾರ ಆರೋಪ ಇಟ್ಟುಕೊಂಟು ಬಿಜೆಪಿ ಬರುವ ದಿನದಲ್ಲಿ ಸುದೀರ್ಘವಾದ, ವ್ಯವಸ್ಥಿತವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗ ಹೋರಾಟ ಮಾಡಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಿಬಿಎಂಪಿಯಲ್ಲಿ ಕಾಮಗಾರಿ ಗುತ್ತಿಗೆ ನೀಡಲು ಎರಡು ರೀತಿಯ ವ್ಯವಸ್ಥೆ ಇದೆ. ಸರ್ಕಾರದಿಂದ ಮಂಜೂರಾದ ಯೋಜನೆ ಮತ್ತು ಬಿಬಿಎಂಪಿ ಹಣದಿಂದ ನಿರ್ವಹಣೆ ಹಾಗು ಇತ್ಯಾದಿ ಕಾಮಗಾರಿಗಳಿವೆ. ಕಾಲ ಕಾಲಕ್ಕೆ ಹಣ ಬಿಡುಗಡೆಯಾದರೆ ಗುತ್ತಿಗೆದಾರರಿಗೆ ಅನುಕೂಲವಾಗಲಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಸಂಪೂರ್ಣ ಸ್ಟ್ರೀಮ್ ಲೈನ್ ಮಾಡಿದ್ದೆ. ಆನ್ಲೈನ್ ಮಾಡಿದೆ. ಸೀನಿಯಾರಿಟಿ ವ್ಯವಸ್ಥೆ ಪಾಲಿಸಿದೆ. ಹಾಗಾಗಿ ನಮ್ಮ ಕಾಲದಲ್ಲಿ ಬಾಕಿ ಬಹಳ ಕಡಿಮೆ ಇತ್ತು ಎಂದರು.
ನಾವು ಮಂಜೂರು ಮಾಡಿದ್ದ ನಗರೋತ್ಥಾನ ಕಾಮಗಾರಿಗಳಿಗೆ ಮಾರ್ಚ್ ತಿಂಗಳಿನಲ್ಲಿ 650 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೆವು. ಮೇ ತಿಂಗಳಿನಲ್ಲಿ ಬಿಬಿಎಂಪಿಗೆ ಬಂದಿದೆ. ಆದರೂ ಬಾಕಿ ಬಿಲ್ ಪಾವತಿಗಾಗಿ ಗುತ್ತಿಗೆದಾರರು ಎಲ್ಲರ ಭೇಟಿ ಮಾಡುತ್ತಿದ್ದಾರೆ. ಈ ಮಟ್ಟಕ್ಕೆ ಯಾಕೆ ಬಂದಿತು? ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ಕೊಡುವ ಪರಿಸ್ಥಿತಿ ಯಾಕೆ ಬಂತು? ಗುತ್ತಿಗೆದಾರರೇ ಬಾಕಿ ಹಣ ಬಿಡುಗಡೆಗೆ ಕಮಿಷನ್ ಕೇಳಿದ್ದಾರೆ ಎಂದು ಆರೋಪ ಮಾಡಿದ್ದಾರೆ.