ಹಾವೇರಿ: ಕಳೆದ ಎರಡು ತಿಂಗಳಿಂದ ಎಲ್ಲೆಡೆ ಕಿಚನ್ ಕ್ವೀನ್ ಟೊಮೆಟೊದ್ದೇ ಮಾತು.
ಟೊಮೆಟೊ ಬೆಳೆ ಈ ಬಾರಿ ರೈತರ ಕೈ ಹಿಡಿದಿದ್ದು, ಅಧಿಕ ಲಾಭ ತಂದುಕೊಟ್ಟಿದೆ. ಇದರ ನಡುವೆ ಕೆಲ ರೈತರು ಟೊಮೆಟೊ ಕಳ್ಳತನವಾಗಬಾರದು ಎಂದು ಜಮೀನಿನಲ್ಲಿ ಕಾವಲು ಕಾಯುತ್ತಿದ್ದಾರೆ. ಆದರೆ ಹಾವೇರಿ ಸಮೀಪದ ದೇವಗಿರಿ ಗ್ರಾಮದ ಟೊಮೆಟೊ ಬೆಳೆಗಾರ ದುರ್ಗಪ್ಪ ಎಂಬುವನ ಕಥೆ ಇದಕ್ಕೆ ಭಿನ್ನವಾಗಿದೆ. ದೇವಗಿರಿಯ ವರದಾ ನದಿ ತಟದಲ್ಲಿ ನಾಲ್ಕೂವರೆ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದ ರೈತ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಮಾರುಕಟ್ಟೆಯಲ್ಲಿ ಟೊಮೆಟೊಗೆ ಬಂಗಾರದ ಬೆಲೆ ಇದೆ, ರೈತ ದುರ್ಗಪ್ಪನ ಜಮೀನಿನಲ್ಲಿ ಸಹ ಗಿಡದ ತುಂಬಾ ಟೊಮೆಟೊ ಬಿಟ್ಟಿವೆ. ಆದರೆ ಸತತ ಮಳೆ ಮತ್ತು ವರದಾ ನದಿಯ ನೀರಿನಿಂದ ದುರ್ಗಪ್ಪನ ಜಮೀನಿಗೆ ನೀರು ನುಗ್ಗಿತ್ತು. ಮಳೆ ಕಡಿಮೆಯಾಗಿ ವರದಾ ನದಿಯ ಪ್ರವಾಹ ಇಳಿಮುಖವಾದರೂ ಸಹ ರೈತನ ಸಮಸ್ಯೆ ಬಗೆಹರಿದಿಲ್ಲ. ಟೊಮೆಟೊ ಕಾಯಿಗಳು ಅಧಿಕ ನೀರಿನಿಂದ ಕೊಳೆಯುತ್ತಿವೆ. ಪ್ರತಿ ಗಿಡದಲ್ಲಿ 5ಕ್ಕೂ ಅಧಿಕ ಟೊಮೆಟೊ ಹಣ್ಣುಗಳು ಹಾಳಾಗಿವೆ.