ಮಂಗಳೂರು: ಇತ್ತೀಚೆಗೆ ಆರೋಪಿಗಳು ಪೊಲೀಸರ ಮೇಲೆ ನೈತಿಕ ಪೊಲೀಸ್ ಗಿರಿ ನಡೆದ ಬೆನ್ನಲ್ಲೇ ಮಾಧ್ಯಮವೊಂದರ ವರದಿಗಾರನ ಮೇಲೂ ನೈತಿಕ ಪೊಲೀಸ್ ಗಿರಿ ನಡೆದಿದೆ.
ಈ ಘಟನೆ ನಗರದ ಕಾವೂರು ಬಳಿಯ ರೆಸ್ಟೋರೆಂಟ್ ಒಂದರಲ್ಲಿ ನಡೆದಿದೆ.
ಮಂಗಳೂರಿನ ಸ್ಥಳೀಯ ಖಾಸಗಿ ನ್ಯೂಸ್ ವೆಬ್ಸೈಟ್ ವರದಿಗಾರನ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಿದ್ದು, ತಕ್ಷಣ ವರದಿಗಾರ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆ ಎಫ್‌ಐಆರ್ ದಾಖಲಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೋಟೇಕಾರು ನಿವಾಸಿ ಚೇತನ್ (37) ಹಾಗೂ ಯೆಯ್ಯಾಡಿ ನಿವಾಸಿ ನವೀನ್ (43) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಜುಲೈ 28ರ ರಾತ್ರಿ ಈ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಇಂದು ಬಂಧಿಸಿದ್ದಾರೆ. ತಮ್ಮ ಸ್ನೇಹಿತೆಯೊಂದಿಗೆ ವರದಿಗಾರರೊಬ್ಬರು ಮಂಗಳೂರಿನ ಕಾವೂರು ಬಳಿಯ ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ವಾಪಾಸ್ ಬರುತ್ತಿದ್ದ ವೇಳೆ ನಿಲ್ಲಿಸಿದ ಇಬ್ಬರು ಯುವಕರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಅಲ್ಲದೆ ಅನ್ಯಧರ್ಮದ ಯುವಕನೆಂದು ತಿಳಿದು ಹಲ್ಲೆಗೆ ಯತ್ನಿಸಿದ್ದಾರೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಗೆ ಸಂತ್ರಸ್ತ ಯುವಕ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ಮೇಲೆ ನೈತಿಕ ಪೊಲೀಸ್ ಗಿರಿ: ಪೊಲೀಸ್ ಮೇಲೆಯೇ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪ ಕೇಳಿ ಬಂದಿರುವ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿತ್ತು. ತುಂಬೆ ನಿವಾಸಿಗಳಾದ ಮನೀಷ್ ಪೂಜಾರಿ ಮತ್ತು ಮಂಜುನಾಥ ಆಚಾರ್ಯ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.