ಕೊಪ್ಪಳ: ದೇಶದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಿಂದ ನಾಲ್ವರು ಕಾರ್ಮಿಕರು ರಾಜ್ಯಕ್ಕೆ ವಲಸೆ ಬಂದರೂ ಅವರನ್ನು ಕ್ವಾರಂಟೈನ್ ಮಾಡದೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ಇದರಿಂದಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.
ಸೋಮವಾರ ಸಂಜೆ 6ಕ್ಕೆ ಮಹಾರಾಷ್ಟ್ರದಿಂದ ಕೊಪ್ಪಳಕ್ಕೆ ಆಗಮಿಸಿದ್ದು, ಇದುವರೆಗೂ ಕಾರ್ಮಿಕರನ್ನು ಕ್ವಾರಂಟೈನ್ ಮಾಡಿಲ್ಲ. ಕೊಪ್ಪಳ ಜಿಲ್ಲೆಯ ನಾಲ್ವರು ಕಾರ್ಮಿಕರು ಸಹ ಬೇಕರಿಯಲ್ಲಿ ಕೆಲಸ ಮಾಡುವವರಾಗಿದ್ದು, ಮಾಹಾರಾಷ್ಟ್ರದ ಖೇಡ್ ನಿಂದ ಆಗಮಿಸಿದ್ದಾರೆ. ಸೋಮವಾರ ಸಂಜೆಯಿಂದ ಕೊಪ್ಪಳ ಬಸ್ ನಿಲ್ದಾಣದಲ್ಲಿಯೇ ಇದ್ದಾರೆ. ಇಷ್ಟಾದರೂ ಈ ಕಾರ್ಮಿಕರನ್ನು ಜಿಲ್ಲಾಡಳಿತ ಕ್ವಾರಂಟೈನ್ ಮಾಡಿಲ್ಲ.
ಸೋಮವಾರ ಸಂಜೆಯಿಂದಲೇ ಇಲ್ಲಿ ಕುಳಿತಿದ್ದೇವೆ. ನಮಗೆ ಊಟ ಕೊಟ್ಟಿಲ್ಲ, ನೀರಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ನಾಲ್ವರು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಹರಾಷ್ಟ್ರದಿಂದ ವಿಜಯಪುರದವರೆಗೂ ರೈಲಿನ ಮೂಲಕ ಬಂದಿದ್ದು, ವಿಜಯಪುರದಿಂದ ಕೊಪ್ಪಳಕ್ಕೆ ಬಸ್‍ನಲ್ಲಿ ಬಂದಿದ್ದಾರೆ. ಕೊರೊನಾ ಹಾಟ್‍ಸ್ಪಾಟ್ ಮಹಾರಾಷ್ಟ್ರದಿಂದ ಆಗಮಿಸಿದರೂ ಕಾರ್ಮಿಕರನ್ನು ಕ್ವಾರಂಟೈನ್ ಮಾಡದೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದ್ದು, ಇದಕ್ಕೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.