ಬೆಂಗಳೂರು: 55 ದಿನಗಳ ಬಳಿಕ ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್ಸುಗಳು ರಸ್ತೆಗೆ ಇಳಿಯಲಿದ್ದರೂ ಎಲ್ಲ ಜನರಿಗೆ ಪ್ರಯಾಣಿಸಲು ಅವಕಾಶವಿಲ್ಲ.
ಹೌದು, ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಬಿಎಂಟಿಸಿ ಕೆಲ ಷರತ್ತುಗಳನ್ನು ವಿಧಿಸಿದೆ. ಹಿರಿಯ ನಾಗರಿಕರು ಮತ್ತು 10 ವರ್ಷದ ಒಳಗಿನ ಮಕ್ಕಳು ಬಸ್ಸಿನಲ್ಲಿ ಪ್ರಯಾಣಿಸುವಂತಿಲ್ಲ. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕೋವಿಡ್ 19 ಪ್ರಕರಣಗಳು ಹೆಚ್ಚು ದಾಖಲಾಗಿರಿವ ಕಂಟೈನ್‍ಮೆಂಟ್ ವಲಯದಲ್ಲಿ ಬಸ್ಸುಗಳು ಸಂಚರಿಸುವುದಿಲ್ಲ.
ಏನೇನು ಎಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ?
ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮಾಸಿಕ ಪಾಸು/ವಾರದ ಪಾಸು/ದೈನಂದಿನ ಪಾಸುಗಳನ್ನು ಹೊಂದಿರುವವರಿಗೆ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ವಾರದ ಪಾಸುಗಳನ್ನು ಪಡೆಯಬೇಕಾದರೆ ಮಾನ್ಯತೆ ಪಡೆದ ಗುರುತಿನ ಚೀಟಿಯನ್ನು ತೋರಿಸಬೇಕಾಗುತ್ತದೆ. ಇದನ್ನೂ ಓದಿ: ಗಮನಿಸಿ, ಬೆಂಗಳೂರಿನಿಂದ ಐದು ಜಿಲ್ಲೆಗಳ ಮಾರ್ಗದಲ್ಲಿ ಮಾತ್ರ ಬಸ್ ಸಂಚಾರ
ಪ್ರಯಾಣಿಕರು ಮೂಗು ಹಾಗೂ ಬಾಯಿ ಮುಚ್ಚಿಕೊಳ್ಳುವಂತೆ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ಮಹಿಳೆಯರಿಗೆ ಪ್ರತ್ಯೇಕ ಬಾಗಿಲು ಇಲ್ಲ. ಎಲ್ಲರೂ ಹಿಂದಿನ ಬಾಗಿಲಿನಿಂದ ಹತ್ತಿ, ಮುಂದಿನ ಬಾಗಿಲಿನಿಂದ ಇಳಿಯಬೇಕಾಗುತ್ತದೆ. ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಸರದಿಯಂತೆ ಹತ್ತಬೇಕು ಮತ್ತು ಇಳಿಯಬೇಕು.
ಪ್ರಯಾಣಿಕರ ಆಸನಗಳು ಭರ್ತಿಯಾಗಿದ್ದಲ್ಲಿ ಆ ಬಸ್ಸನ್ನು ಹತ್ತುವಂತಿಲ್ಲ. ಮುಂದಿನ ಬಸ್ಸಿಗೆ ಕಾಯಬೇಕು. ಜ್ವರ ಹಾಗೂ ಇತರೇ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ಬಸ್ಸಿನಲ್ಲಿ ಪ್ರಯಾಣಿಸುವಂತಿಲ್ಲ