ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಭಾರಿ ಸ್ಪಂದನೆ ದೊರೆಯುತ್ತಿದ್ದು, ಈ ನಿಟ್ಟಿನಲ್ಲಿ ನಾಲ್ಕು ನಿಗಮದ ಬಸ್ಗಳಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚುತ್ತಿದೆ.
ಮಹಿಳೆಯರ ಉಚಿತ ಪ್ರಯಾಣದ ವೇಳೆ ಪ್ರತಿ ಬಾರಿಯ ಕಿರಿಕಿರಿ ತಪ್ಪಿಸುವ ಸಲುವಾಗಿ ಟ್ಯಾಪ್ ಆಯಂಡ್ ಟ್ರಾವೆಲ್ ತಂತ್ರಜ್ಞಾನದ ಸ್ಮಾರ್ಟ್ ಕಾರ್ಡ್ ನೀಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿಂತಿಸಿದೆ.
ಸದ್ಯ ಬಸ್ಗಳಲ್ಲಿ ಮಹಿಳೆಯರು ಆಧಾರ್ ಕಾರ್ಡ್ ಮತ್ತು ಇತರೆ ದಾಖಲೆಗಳನ್ನು ತೋರಿಸಿ ಉಚಿತವಾಗಿ ಸಂಚರಿಸುತ್ತಿದ್ದಾರೆ. ಆದ್ರೆ ಬಸ್ ಕಿಕ್ಕಿರಿದು ತುಂಬಿದಾಗ ದಾಖಲೆ ಪರಿಶೀಲನೆ ಕಷ್ಟವಾಗುತ್ತಿದೆ. ಹೀಗಾಗಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡುವ ಕುರಿತು ಚಿಂತನೆ ನಡೆಸಲಾಗಿದೆ. ಇದರಿಂದ ನಿರ್ವಾಹಕರಿಗೆ ಟಿಕೆಟ್ ನೀಡುವುದು ಸುಲಭವಾಗಲಿದೆ.
ನಮ್ಮ ಮೆಟ್ರೋ ಮಾದರಿ: ನಮ್ಮ ಮೆಟ್ರೊ ರೈಲು ಸೇವೆಯಲ್ಲಿನ ಟ್ಯಾಪ್ ಆಯಂಡ್ ಟ್ರಾವೆಲ್ ಸ್ಮಾರ್ಟ್ ಕಾರ್ಡ್ ಮಾದರಿಯಲ್ಲೇ ಶಕ್ತಿ ಯೋಜನೆಗೂ ಸ್ಮಾರ್ಟ್ ಕಾರ್ಡ್ ನೀಡಲು ಯೋಜನೆ ಹಾಕಲಾಗಿದೆ. ಮಹಿಳೆಯರು ಬಸ್ ಹತ್ತುವಾಗ ಬಾಗಿಲಲ್ಲಿ ಅಳವಡಿಸುವ ಯಂತ್ರಕ್ಕೆ ಸ್ಮಾರ್ಟ್ ಕಾರ್ಡ್ ಟ್ಯಾಪ್ ಮಾಡಿ ನಂತರ ಇಳಿಯುವಾಗ ಮತ್ತೊಮ್ಮೆ ಟ್ಯಾಪ್ ಮಾಡಬೇಕಿದೆ. ಆಗ ಮಹಿಳಾ ಪ್ರಯಾಣಿಕರು ಎಲ್ಲಿಂದ, ಎಲ್ಲಿಗೆ ಪ್ರಯಾಣಿಸಿದರು ಎಂಬ ನಿಖರ ಮಾಹಿತಿ ಪಡೆಯಬಹುದು.
ಪ್ರತಿ ಸ್ಮಾರ್ಟ್ ಕಾರ್ಡ್‌ಗೆ 30 ರೂಪಾಯಿ ವೆಚ್ಚ: ಟ್ಯಾಪ್ ಆಯಂಡ್ ಟ್ರಾವೆಲ್ ಸ್ಮಾರ್ಟ್ ಕಾರ್ಡ್ ನೀಡುವುದರಿಂದ ನಿಗಮದ ಮೇಲಾಗುವ ಆರ್ಥಿಕ ಹೊರೆಯ ಬಗ್ಗೆಯೂ ಗಮನಹರಿಸಬೇಕಾಗಿದ್ದು, ಪ್ರತಿ ಸ್ಮಾರ್ಟ್ ಕಾರ್ಡ್‌ಗೆ ಕನಿಷ್ಟ 20-30 ರೂಪಾಯಿ ತಗುಲಲಿದೆ. ಆದ್ದರಿಂದ ಸ್ಮಾರ್ಟ್ ಕಾರ್ಡ್‌ಗಾಗಿಯೇ 20 ಕೋಟಿಗೂ ಅಧಿಕ ಹಣ ವೆಚ್ಚವಾಗಲಿದೆ.