ಬೆಳಗಾವಿ : ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಎಂಬುದು ಇದ್ದೇ ಇರುತ್ತದೆ.
ನಾವು ಪರಿಹಾರವನ್ನು ಹುಡುಕುವ ಮನಸು ಮಾಡಬೇಕು ಅಷ್ಟೇ. ಇದಕ್ಕೆ ಉದಾಹರಣೆ ಎಂಬಂತೆ ಬೆಳಗಾವಿ ವಿದ್ಯಾರ್ಥಿಗಳು ವಿದ್ಯುತ್ ವ್ಯತ್ಯಯದಿಂದ ಓದು ಬರಹಕ್ಕೆ ತೊಂದರೆ ಆಗುತ್ತಿದ್ದರೂ ಸಹಾ ಕೈಕಟ್ಟಿ ಕೂರದೇ ಸ್ವತಃ ತಾವೇ ಲೈಟ್ ಪೆನ್ ಕಂಡು ಹಿಡಿಯುವ ಮೂಲಕ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಬಾಲ್ಯದಲ್ಲೇ ಇಂತಹ ಕ್ರಿಯಾತ್ಮಕ ಕೆಲಸದಿಂದ ಉದ್ಯಮಿಗಳಾಗುವತ್ತ ಹೆಜ್ಜೆ ಇಟ್ಟಿದ್ದಾರೆ.
ಹೌದು, ಈ ಸಾಧನೆ ಮಾಡಿರುವ ಆರು ವಿದ್ಯಾರ್ಥಿಗಳು ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಕತ್ರಿದಡ್ಡಿ ಗ್ರಾಮದವರು. 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಹೊಸ ಅನ್ವೇಷಣೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಕತ್ರಿದಡ್ಡಿ ಗ್ರಾಮದಲ್ಲಿ ಪದೇ ಪದೇ ವಿದ್ಯುತ್ ಸ್ಥಗಿತವಾಗುತ್ತಿತ್ತು. ಅಲ್ಲದೇ ತಂದೆ-ತಾಯಿ ಕೃಷಿಕರಾಗಿದ್ದರಿಂದ ದಿನಪೂರ್ತಿ ಕೆಲಸ ಮಾಡಿ ಬಂದು, ರಾತ್ರಿ ವೇಳೆ ಊಟ ಮಾಡಿ ಲೈಟ್ ಆಫ್ ಮಾಡಿ ಮಲಗಿ ಬಿಡುತ್ತಿದ್ದರು. ಇದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆ ಆಗುತ್ತಿತ್ತು.
ಗಮನಿಸಿದ ವಿದ್ಯಾರ್ಥಿಗಳಾದ ಸುದೀಪ ಹತ್ತಿ, ಸುನೀಲ ಮಾಶೇವಾಡಿ, ಗಂಗಪ್ಪ ಹಿಗಣಿ, ಸುದೀಪ ತೋಪಗಾನಿ, ನವೀನ ದೊಡವಾಡ, ಪ್ರೇಮಕುಮಾರ ಹಟ್ಟಿಹೊಳಿ ಎಂಬ ಆರು ವಿದ್ಯಾರ್ಥಿಗಳು ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡು ಹಿಡಿಯಬೇಕೆಂದು ನಿಶ್ಚಯಿಸಿದ್ದರು. ಬಳಿಕ ಎಲ್ಲರೂ ಒಟ್ಟಿಗೆ ಲೈಟ್ ಪೆನ್ ಅನ್ವೇಷಣೆ ಮಾಡಿದ್ದಾರೆ. ಇದರಿಂದ ಕತ್ತಲಿನಲ್ಲೂ ಸರಳವಾಗಿ ಓದು ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಸಣ್ಣ ವಯಸ್ಸಿನಲ್ಲೇ ಉದ್ಯಮಿಗಳಾಗಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾರೆ.
ಲೈಟ್ ಪೆನ್ ಕಂಡು ಹಿಡಿದ ಬೆಳಗಾವಿ ವಿದ್ಯಾರ್ಥಿಗಳುಹೂಡಿಕೆಗೆ ಮುಂದಾದ ಎಜ್ಯುಕೇಷನ್ ಇಂಡಿಯಾ ಸಂಸ್ಥೆ: ಈ ವಿದ್ಯಾರ್ಥಿಗಳಲ್ಲಿನ ಕೌಶಲ್ಯ ಗುರುತಿಸಿರುವ ಎಜ್ಯುಕೇಷನ್ ಇಂಡಿಯಾ ಮತ್ತು ಧಾರವಾಡದ ಸುಕೃತಿ ಮಂತ್ರ ಸಂಸ್ಥೆ ಇವರ ಬೆನ್ನಿಗೆ ನಿಂತಿದ್ದು, ವಿದ್ಯಾರ್ಥಿಗಳು ತಯಾರಿಸಲು ಯೋಜಿಸಿರುವ 10 ಸಾವಿರ ಪೆನ್ಗಳ ಖರೀದಿಗೆ ಎಜ್ಯುಕೇಷನ್ ಇಂಡಿಯಾ ಸಂಸ್ಥೆ 20 ಲಕ್ಷ ರೂ. ಹೂಡಿಕೆ ಮಾಡಲು ಮುಂದೆ ಬಂದಿದೆ.