ಮೈಸೂರು: ಟಿ ನರಸೀಪುರ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣದ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಪ್ರತಿಕ್ರಿಯಿಸಿದ್ದಾರೆ. ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಶ್ರೀರಾಂಪುರ ಕಾಲೋನಿಯ ವೇಣುಗೋಪಾಲ್ (32) ಎಂಬಾತ ನಿನ್ನೆ(ಭಾನುವಾರ) ಹತ್ಯೆಯಾಗಿದ್ದರು. ಇವರು ಯುವ ಬ್ರಿಗೇಡ್ನ ಸದಸ್ಯ.
ಘಟನೆಗೆ ಕೋಮು ಸಂಬಂಧ ಇಲ್ಲ: ಪುನೀತ್ ರಾಜ್ ಕುಮಾರ್ ಫೋಟೋ ಅಳವಡಿಕೆ ವಿಚಾರಕ್ಕೆ ಹಾಗೂ ಬೈಕ್ ನಿಲ್ಲಿಸುವ ವಿಚಾರದಲ್ಲಿ ಜಗಳ ನಡೆದಿದೆ. ಈ ಜಗಳದಲ್ಲಿ ಯುವಕ ವೇಣುಗೋಪಾಲ್ (32) ಎಂಬಾತ ಕೊಲೆಗೀಡಾಗಿದ್ದಾರೆ. ಇದಕ್ಕೆ ಯಾವುದೇ ಮುಸ್ಲಿಂ ವ್ಯಕ್ತಿಯ ಕೈವಾಡ ಇಲ್ಲ. ಜತೆಗೆ ಘಟನೆಗೆ ಯಾವುದೇ ಕೋಮು ಸಂಬಂಧ ಇಲ್ಲ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸ್ಪಷ್ಟಪಡಿಸಿದ್ದಾರೆ.
ಘಟನಾ ಸ್ಥಳದಲ್ಲಿ ಹ್ಯಾರಿಸ್ ಸರ್ವಿಸ್ ಸೆಂಟರ್ ಇತ್ತು. ಸಹಜವಾಗಿ ಘಟನೆ ನಡೆದಾಗ ವೇಣುಗೋಪಾಲ್ ಸಹ ಸ್ಥಳದಲ್ಲಿ ಇದ್ದರು. ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳ ಸೆರೆಗಾಗಿ ಒಂದು ತಂಡವನ್ನು ರಚಿಸಲಾಗಿದೆ ಎಂದು ಸೀಮಾ ಲಾಟ್ಕರ್ ತಿಳಿಸಿದ್ದಾರೆ.