ಬೆಂಗಳೂರು: ಸರ್ಕಾರ ಬದಲಾಗಿ ಮೊದಲ ಅಧಿವೇಶನ ಆರಂಭಗೊಂಡಿದ್ದು, ಆಡಳಿತ ಪಕ್ಷ ಪ್ರತಿಪಕ್ಷದ ಸಾಲಿನಲ್ಲಿ ಪ್ರತಿಪಕ್ಷ ಆಡಳಿತ ಪಕ್ಷದ ಸಾಲಿಗೆ ಬಂದರೆ ಹಿರಿಯ ಸದಸ್ಯ ಹೆಚ್ ವಿಶ್ವನಾಥ್ ಸ್ಥಾನ ಮಾತ್ರ ಬದಲಾಗಿಲ್ಲ.
ಬಿಜೆಪಿ ಸರ್ಕಾರ ಇದ್ದಾಗಲೂ ಆಡಳಿತ ಪಕ್ಷದ ಸಾಲಿನಲ್ಲಿ ಇದ್ದ ಅವರು ಇದೀಗ ಕಾಂಗ್ರೆಸ್ ಸರ್ಕಾರ ಬಂದಿದ್ದರೂ ಆಡಳಿತ ಪಕ್ಷದ ಸಾಲಿನಲ್ಲೇ ಆಸೀನರಾಗಿದ್ದಾರೆ.
ಬಿಜೆಪಿ ಸರ್ಕಾರದ ವೇಳೆ ನಾಮ ನಿರ್ದೇಶನಗೊಂಡಿದ್ದ ಹೆಚ್ ವಿಶ್ವನಾಥ್ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಪಕ್ಷದ ಜೊತೆ ಮುನಿಸಿಕೊಂಡು ಅಂತರ ಕಾಯ್ದುಕೊಂಡಿದ್ದರು. ಆಡಳಿಯ ಪಕ್ಷದ ಸಾಲಿನಲ್ಲಿದ್ದುಕೊಂಡೇ ಸರ್ಕಾರವನ್ನು ಟೀಕಿಸಿ ಆಡಳಿತ ಪಕ್ಷವನ್ನು ಮುಜುಗರಕ್ಕೆ ಸಿಲುಕುವಂತೆ ಮಾಡುತ್ತಿದ್ದರು. ಹಳ್ಳಿ ಹಕ್ಕಿಯ ಕುಟಕು ಪ್ರತಿ ಅಧಿವೇಶನದಲ್ಲೂ ಸಾಮಾನ್ಯವಾಗಿತ್ತು.
ಚುನಾವಣೆ ಸಮೀಪ ಬರುತ್ತಿದ್ದಂತೆ ಅಧಿಕೃತವಾಗಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದ ಹೆಚ್. ವಿಶ್ವನಾಥ್ ಬಿಜೆಪಿ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದರು. ಈ ಹಿಂದೆ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದ ವಿಶ್ವನಾಥ್ ಮತ್ತೆ ಅದೇ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದರು. ಇದೀಗ ಸಹಜವಾಗಿಯೇ ಕಾಂಗ್ರೆಸ್ ಸಖ್ಯದ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಸಾಲಿನಲ್ಲೇ ಆಸನ ಪಡೆದುಕೊಂಡು ಮತ್ತೆ ಆಡಳಿತ ಪಕ್ಷದ ಜೊತೆಯಲ್ಲಿಯೇ ಇದ್ದಾರೆ.ವಿಶ್ವನಾಥ್ ಅವರು ನಾಮ ನಿರ್ದೇಶಿತ ಸದಸ್ಯರಾದ ಕಾರಣ ಅವರ ಮೇಲೆ ಪಕ್ಷದ ಹಿಡಿತ ಇರುವುದಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆಯ ಅಸ್ತ್ರ ಅನ್ವಯವಾಗಲ್ಲ. ಹಾಗಾಗಿ ಅವರು ಕಾಂಗ್ರೆಸ್ ಜೊತೆ ಬಹಿರಂಗವಾಗಿಯೇ ಗುರುತಿಸಿಕೊಂಡು ಈಗ ಕಾಂಗ್ರೆಸ್ ಸದಸ್ಯರ ಜೊತೆಯಲ್ಲಿಯೇ ಆಸೀನರಾಗಿ ಕಲಾಪದಲ್ಲಿ ಭಾಗಿಯಾಗಿದ್ದಾರೆ.
Laxmi News 24×7