ಮೈಸೂರು: ಡಿಕೆ ಶಿವಕುಮಾರ್ ಒಬ್ಬ ಫೈಟರ್. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಅವರ ಹೋರಾಟವೇ ಪ್ರಮುಖ ಕಾರಣ ಎಂದು ಸಂಸದ ಪ್ರತಾಪ್ ಸಿಂಹ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಹಾಡಿ ಹೊಗಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಸೈನ್ ಬಾಕ್ಸ್ ಏಜೆನ್ಸಿ ಮೂಲಕ ಗ್ಯಾರಂಟಿ ಯೋಜನೆ ರೂಪಿಸಿದವರು ಡಿಕೆ ಶಿವಕುಮಾರ್. ಅವರು ನಮ್ಮ ಎದುರಾಳಿ ಇರಬಹುದು. ನಾನು ರಾಜಕೀಯ ಕಾರಣಕ್ಕೆ ಈ ರೀತಿ ಹೇಳುತ್ತಿಲ್ಲ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕಿತ್ತು ಎಂದರು.
ಸಂಸದ ಪ್ರತಾಪ್ ಸಿಂಹ ಎಳಸು, ರಾಜಕೀಯ ಪ್ರಬುದ್ಧತೆ ಇಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನನ್ನು ಎಳಸು ಎಂದದ್ದಕ್ಕೆ ಬೇಜಾರಿಲ್ಲ. ರಾಜಕೀಯ ಪ್ರಬುದ್ಧತೆ ಇರುವ ನೀವು ನಾನು ಕೇಳಿದ ಪ್ರಶ್ನೆಗಳಿಗೆ ಏಕೆ ಉತ್ತರ ನೀಡುತ್ತಿಲ್ಲ ಅನ್ನೋದು ಬೇಜಾರಾಗುತ್ತಿದೆ. ನೀವು ಬುದ್ಧಿವಂತರು, ರಾಜ್ಯದ ಹಣಕಾಸು ವ್ಯವಸ್ಥೆ ತಿಳಿದಿರುವ ನೀವು ಹೇಗೆ ಗ್ಯಾರಂಟಿ ಘೋಷಣೆ ಮಾಡಿದ್ರಿ? ನನ್ನನ್ನ ಚೈಲ್ಡ್ ಅಂತಾನೆ ಕರಿಯಿರಿ, ನನಗೇನು ಬೇಜಾರಿಲ್ಲ. ಆದರೆ, ರಾಜ್ಯದಲ್ಲಿ ಸಂಪನ್ಮೂಲ ಕ್ರೋಢೀಕರಣ ಮಾಡುವುದು ಹೇಗೆ ಅನ್ನೋದು ತಿಳಿಸಿ ಎಂದು ಪ್ರಶ್ನಿಸಿದರು.
ಆ ರೀತಿಯ ಪ್ರಬುದ್ಧತೆ ನನಗೆ ಬೇಕಿಲ್ಲ: ಸೀನಿಯರ್ ರಾಜಕಾರಣಿ ಆಗಿರುವ ನೀವು ಜಿ ಪರಮೇಶ್ವರ್ ಅವರನ್ನು ಮುಗಿಸಿ ಮುಖ್ಯಮಂತ್ರಿ ಆಗಿದ್ರಲ್ಲ ಆ ರೀತಿಯ ಪ್ರಬುದ್ಧತೆ ನನಗೆ ಬೇಕಿಲ್ಲ ಸರ್ ಎಂದು ನಯವಾಗಿಯೆ ಕಾಲೆಳೆದ ಸಿಂಹ, ರಾಜಕೀಯ ಜೀವನದಲ್ಲಿ ಮುಂದೆ ಬರಲು ಸಹಕರಿಸಿದ ಹೆಚ್ ಡಿ ದೇವೇಗೌಡರನ್ನ ಅಗೌರವವಾಗಿ ಮಾತನಾಡುವುದು ನಿಮ್ಮ ಪ್ರಬುದ್ಧತೆ ಅನ್ನುವುದಾದರೆ, ಅದು ನನಗೆ ಬೇಡ ಸರ್. ಅಕ್ಕಿ ಕೊಡುವ ಘೋಷಣೆ ಮಾಡುವ ಮುನ್ನ ಪ್ರಧಾನಿ ಅವರನ್ನು ಕೇಳಿದ್ರಾ? ಕೇಳಿರಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಡಿಕೆ ಶಿವಕುಮಾರ್ ಅವರ ಪಾತ್ರ ದೊಡ್ಡದು. ಅವರ ವಿರುದ್ಧವೇ ಎಂಬಿ ಪಾಟೀಲ್ ಅವರನ್ನು ಚೂ ಬಿಟ್ಟಿದ್ದೀರಿ. ಇದನ್ನೆಲ್ಲಾ ಪ್ರಬುದ್ಧತೆ ಎನ್ನುವುದಾದ್ರೆ ಇದ್ಯಾವುದೂ ನಮಗೆ ಬೇಡ ಸರ್ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯನವರನ್ನು ಕುಟುಕಿದರು.