ಗದಗ: ಲಾಕ್‌ಡೌನ್ ನಿಂದಾಗಿ ಗೋವಾದಲ್ಲಿ ಸಿಲುಕಿರುವ ಕರ್ನಾಟಕದ ಮೂಲದ ಕಾರ್ಮಿಕರು ಪರದಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕಾರ್ಮಿಕರನ್ನು ರಾಜ್ಯಕ್ಕೆ ಕರೆ ತರಲು ಬಸ್ ವ್ಯಸವ್ತ ಮಾಡಿದೆ. ಆದ್ರೆ ದುಪ್ಪಟ್ಟು ಹಣ ಪಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕೆಎಸ್ಆರ್ಟಿಸಿ ಸಂಸ್ಥೆ ಪ್ರಯಾಣ ದರವನ್ನು ಏರಿಕೆ ಮಾಡಿ ನಮಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ ಅಂತ ಬಸ್ ಮುಂದೆಯೇ ಗೋವಾದಲ್ಲಿ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಗೋವಾ ಗಡಿಯಿಂದ ಗದಗ ನಗರಕ್ಕೆ ತಲಾ ಒಬ್ಬರಿಗೆ ಬರೋಬ್ಬರಿ 3 ಸಾವಿರ ರೂಪಾಯಿ ದರ ನಿಗದಿ ಮಾಡಲಾಗಿದೆ ಅಂತ ಕಾರ್ಮಿಕರು ಆರೋಪಿಸಿದ್ದಾರೆ. ಹೀಗಾಗಿ ದರ ಹೆಚ್ಚಳ ವಿರೋಧಿಸಿ ಅಧಿಕಾರಿಗಳ ವಿರುದ್ಧ ಕಾರ್ಮಿಕರು ಬಸ್ ತಡೆದು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ವಿವಿಧ ತಾಂಡಾಗಳ ಜನರು ಗೋವಾಕ್ಕೆ ದುಡಿಯಲು ಗುಳೆ ಹೋಗಿದ್ದರು.
ಲಾಕ್ ಡೌನ್ನಿಂದಾಗಿ ದುಡಿಮೆ ಇಲ್ಲದೆ ಜೀವನ ಕಷ್ಟವಾಗಿತ್ತು. ಹೋಗಲಿ ಊರಿಗೆ ಹೋಗೋಣ ಅಂದ್ರೆ ಬಸ್ ಕೂಡ ಇಲ್ಲ. ಇಷ್ಟೆಲ್ಲ ಸಂಕಷ್ಟದ ನಡುವೆಯೇ ಬರೋಬ್ಬರಿ 2 ತಿಂಗಳು ಪರದಾಡಿದ ಕಾರ್ಮಿಕರ ಗಾಯದ ಮೇಲೆ ಬರೆ ಎಳೆಯುವ ಸ್ಥಿತಿಯನ್ನು ಕೆಎಸ್ಆರ್ಟಿಸಿ ತಂದಿಟ್ಟಿದೆ.
ಕಷ್ಟದ ಸಮಯದಲ್ಲಿ ನೆರವಾಗಬೇಕಿದ್ದ ಸರ್ಕಾರ 3 ಸಾವಿರ ರೂಪಾಯಿ ದರ ಏರಿಕೆ ಮಾಡಿದರೆ ನಾವು ಕೊಡೋದು ಹೇಗೆ..? ಅಂತ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಯ ಸುಮಾರು ಸಾವಿರಕ್ಕೂ ಹೆಚ್ಚು ಜನರು ಗೋವಾ ಮತ್ತು ಗಡಿಯ ಕಾರವಾರದ ಬಳಿ ನಿಂತಿದ್ದು, ಸೂಕ್ತ ದರದಲ್ಲಿ ನಮ್ಮ ಜಿಲ್ಲೆಗಳಿಗೆ ಕರೆದೊಯ್ಯುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.