ಯಾದಗಿರಿ: ತಾಯಿ ಈ ಜಗದ ಕಾಣಿಸುವ ದೇವರು, ತಾನು ಹೆತ್ತ ಕೂಸುಗಳು ಮುದುಕರಾದ್ರು ತಾಯಿಗೆ ಅವರು ಯಾವಾಗಲೂ ಹಸುಗೂಸುಗಳೇ. ಇಂತಹ ತಾಯಿ ಹೃದಯ ಎಲ್ಲಕ್ಕಿಂತಲೂ ಶ್ರೇಷ್ಠ ಅನ್ನೋದು ಮತ್ತೊಮ್ಮೆ ನಿಜವಾಗಿದೆ. ಅಧಿಕಾರಿಗಳ ಮತ್ತು ಕೊರೊನಾ ಭೀತಿಯ ನಡುವೆಯೂ ಕ್ವಾರಂಟೈನ್ ನಲ್ಲಿ ತನ್ನ ಮಗ ಎರಡು ದಿನದಿಂದ ಉಪವಾಸವಿರುವುದನ್ನು ತಿಳಿದ ತಾಯಿಯೊಬ್ಬಳು, ಕ್ವಾರಂಟೈನ್ ಕೇಂದ್ರ ದತ್ತ ಓಡಿಬಂದು ಬುತ್ತಿತಂದು ಹೆತ್ತ ಕರಳಿನ ಮಹತ್ವವನ್ನು ತಿಳಿಸಿದ್ದಾಳೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸೂಗೂರು ಗ್ರಾಮದ ಶಾಲೆಯ ಕ್ವಾರಂಟೈನ್ ಕೇಂದ್ರ ಬಳಿ, ಕಣ್ಣಲ್ಲಿ ನೀರು ತರಿಸುವ ತಾಯಿ ಮಗನ ಅನುಬಂಧ ಘಟನೆ ನಡೆದಿದೆ. ಮಹಾರಾಷ್ಟ್ರದಿಂದ ಬಂದ ಈ ಗ್ರಾಮದ 9 ಮಂದಿ ಕಾರ್ಮಿಕರನ್ನು ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಶಾಲೆಯಲ್ಲಿ ಜನ ವಾಸಿಸಲು ಯಾವುದೇ ಸೌಲಭ್ಯವಿಲ್ಲ. ಕುಡಿಯಲು ನೀರು ಸಹ ಇಲ್ಲ, ಇದರ ಜೊತೆಗೆ ಹೆಣ್ಣು ಮಕ್ಕಳು ಶೌಚಾಲಯಕ್ಕೆ ಬಯಲಿಗೆ ಹೋಗುತ್ತಿದ್ದಾರೆ. ಆದರೆ ಇಲ್ಲಿರುವ ಮಗನಿಗೆ ತಾಯಿ ಊಟ ಹೊತ್ತು ತಂದಿದ್ದಾಳೆ.
ಇದರ ಜೊತೆಗೆ ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡುತ್ತಿಲ್ಲ. ಹೀಗಿದ್ದರೂ ಸುರಪುರ ತಹಶೀಲ್ದಾರ್ ನಿಂಗಣ್ಣ ಉದ್ಧಟತನ ತೋರುತ್ತಿದ್ದಾರೆ. ಗ್ರಾಮಸ್ಥರ ಮತ್ತು ಕ್ವಾರಂಟೈನ್ ನಲ್ಲಿರುವ ಕಾರ್ಮಿಕರಿಗೆ, ದರ್ಪದ ಮಾತುಗಳನ್ನಾಡುತ್ತಿದ್ದಾರೆಂಬ ಆರೋಪಗಳಿವೆ.
ಇದರ ನಡುವೆ ಕಳೆದ ಎರಡು ದಿನದಿಂದ ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ಸರಿಯಾದ ಊಟದ ವ್ಯವಸ್ಥೆ ಸಹ ಇಲ್ಲ. ಇದನ್ನು ತಿಳಿದ ಗ್ರಾಮದ ನರಸಮ್ಮ ಎಂಬ ಮಹಿಳೆ ತನ್ನ ಮಗನಿಗೆ ಮನೆಯಿಂದ ಬುತ್ತಿತಂದು, ಆತನಿಗೆ ನೀಡಲು ಮುಂದಾಗಿದ್ದಾಳೆ. ಆದರೆ ಇದನ್ನು ಗ್ರಾಮಸ್ಥರು ಮತ್ತು ಅಧಿಕಾರಿಗಳು ತಡೆಯಲು ಮುಂದಾಗಿದ್ದಾರೆ. ಆಗ ಅಧಿಕಾರಿಗಳ ಬಳಿ, ನರಸಮ್ಮ ಪರಿಪರಿಯಾಗಿ ಬೇಡಿಕೊಂಡಿದ್ದಾಳೆ. ನರಸಮ್ಮಳ ಹೆತ್ತ ಮನಕ್ಕೆ ಕರಗಿದ ಅಧಿಕಾರಿಗಳ ಮನೆ ಊಟ ಕೊಡಲು ಅನುಮತಿ ನೀಡಿದ್ದಾರೆ.