ಬೆಂಗಳೂರು: ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳ ಪೈಕಿ ಪಿಂಚಣಿ ಸೌಲಭ್ಯ ಪಡೆದುಕೊಳ್ಳುವವರಿಗೆ ಅವರ ಪಿಂಚಣಿ ಮೊಟಕು ಮಾಡುವುದಿಲ್ಲ, ಈ ಬಗ್ಗೆ ಗೊಂದಲ ಬೇಡ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.
ವಿಕಾಸಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಂದಾಯ ಇಲಾಖೆಯ ಅಡಿಯಲ್ಲಿ 78 ಲಕ್ಷ ನಾನಾ ರೀತಿಯ ಜನರಿಗೆ ವಿವಿಧ ರೀತಿಯ ಪಿಂಚಣಿ ಸೌಲಭ್ಯ ಇದೆ. ಇದಕ್ಕಾಗಿ 10,411 ಕೋಟಿ ಈ ವರ್ಷ ಖರ್ಚು ಆಗುತ್ತದೆ. ಗೃಹ ಲಕ್ಷ್ಮೀ ಯೋಜನೆ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮೊಟಕು ಮಾಡಲಾಗುದಿಲ್ಲ ಎಂದು ಸ್ಪಷ್ಟಪಡಿಸಿದರು.ಆದರೆ ಈ ಬಗ್ಗೆ ಕೆಲವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಯಾವುದೇ ರೂಪದಲ್ಲಿ ಪಿಂಚಣಿ ಪಡೆದುಕೊಳ್ಳುವವರಿಗೆ ಗೃಹ ಲಕ್ಷ್ಮೀ ಯೋಜನೆ ಫಲಾನುಭವಿ ಆದರೂ ಅವರಿಗೆ ಈಗಾಗಲೇ ಸಿಗುವ ಪಿಂಚಣಿಯನ್ನು ಮೊಟಕು ಮಾಡುವುದಿಲ್ಲ ಎಂದರು.
ಪಿಂಚಣಿದಾರ ಮಹಿಳೆಯರಿಗೆ ಇದೀಗ ಗೃಹ ಲಕ್ಷ್ಮೀ ಯೋಜನೆ ಸಿಗುವ ಫಲವಾಗಿ, ಕೆಲವು ಮಹಿಳೆಯರಿಗೆ ಪಿಂಚಣಿ ಸೇರಿ 3200 ರೂಪಾಯಿ ತಿಂಗಳಿಗೆ ಸಿಗಲಿದೆ. ಈ ನಿಟ್ಟಿನಲ್ಲಿ ಅನಗತ್ಯ ಗೊಂದಲ ಸೃಷ್ಟಿ ಬೇಡ ಎಂದರು.