ಹುಬ್ಬಳ್ಳಿ:ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಸುಸಜ್ಜಿತ ರಸ್ತೆ, ಯುಜಿಡಿ, ನೀರು, ಪಾರ್ಕಿಂಗ್ ಹಾಗೂ ಉದ್ಯಾನ ಸೇರಿದಂತೆ ಅಗತ್ಯ ಮೂಲಸೌಲಭ್ಯವುಳ್ಳ ಮಾದರಿಯ ಟೌನ್‌ಶಿಪ್ ನಿರ್ಮಿಸಲು ಯೋಜಿಸಲಾಗಿದ್ದು,
ಈ ಬಗ್ಗೆ ಈಗಾಗಲೇ ನಗರಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ ಎಂದು ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದರು.
ನಗರದ ‘ವಿಜಯ ಕರ್ನಾಟಕ’ ಕಚೇರಿಯಲ್ಲಿ ಸೋಮವಾರ ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ನಡೆದ ‘ಶಾಸಕರೊಂದಿಗೆ ವಿಕ ಸಂವಾದ ಕಾರ್ಯಕ್ರಮದಲ್ಲಿ’ ಅವರು ಮಾತನಾಡಿದರು.
ಹು-ಧಾ ಬಿಆರ್‌ಟಿಎಸ್ ರಸ್ತೆಯ ಅಕ್ಕಪಕ್ಕದಲ್ಲಿ ಒಂದು ಸಾವಿರ ಎಕರೆ ಜಮೀನು (ಇದಕ್ಕಿಂತ ಹೆಚ್ಚಿದ್ದರೂ, ಕಡಿಮೆ ಇದ್ದರೂ ಅದರಲ್ಲಿಯೋಜನೆ ಕಾರ್ಯಗತ) ಗುರುತಿಸುವ ಮೂಲಕ ಮಾದರಿ ಟೌನ್‌ಶಿಪ್ ನಿರ್ಮಿಸಲಾಗುವುದು. ಇದು ನನ್ನ ಕನಸಿನ ಯೋಜನೆ ಆಗಿದೆ ಎಂದರು.