ಅಥಣಿ: ‘ಅಥಣಿ ಹಾಗೂ ಕಾಗವಾಡ ತಾಲ್ಲೂಕುಗಳಲ್ಲಿ ವೃದ್ಧಾಪ್ಯ ವೇತನ, ಅಂಗವಿಕಲ ಮಾಸಾಶನಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಅವ್ಯವಹಾರ ನಡೆಯುತ್ತಿದೆ’ ಎಂದು ಕಾಗವಾಡ ಶಾಸಕ ಭರಮಗೌಡ ಕಾಗೆ ಆರೋಪಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಥಣಿ, ಕಾಗವಾಡ ತಾಲ್ಲೂಕುಗಳ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
’60 ವರ್ಷ ದಾಟಿದವರಿಗೆ ಹಾಗೂ ಶೇ 75ಕ್ಕಿಂತ ಅಧಿಕ ಅಂಗವೈಕಲ್ಯ ಹೊಂದಿದವರಿಗೆ ಈ ಸೌಲಭ್ಯ ಒದಗಿಸಬೇಕೆನ್ನುವ ನಿಯಮವಿದೆ. ಆದರೆ, ಅಧಿಕಾರಿಗಳು ನಿಯಮ ಗಾಳಿಗೆ ತೂರುತ್ತಿದ್ದಾರೆ. ಹಣ ಪಡೆದು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. 40ರಿಂದ 50 ವರ್ಷ ವಯಸ್ಸಿನವರಿಗೂ ವೃದ್ಧಾಪ್ಯ ವೇತನ ಮಂಜೂರುಗೊಳಿಸಲಾಗಿದೆ. ಇಂತಹ ಶೇ 50ರಷ್ಟು ಪ್ರಕರಣ ಬೆಳಕಿಗೆ ಬಂದಿವೆ’ ಎಂದು ದೂರಿದರು.
ಇದಕ್ಕೆ ಧ್ವನಿಗೂಡಿಸಿದ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು, ‘ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು. ‘ನಿಯಮ ಬಾಹಿರವಾಗಿ ಪಡೆದ ಹಣವನ್ನು ಫಲಾನುಭವಿಗಳಿಂದ ವಾಪಸ್ ಪಡೆಯಬೇಕು’ ಎಂದೂ ನಿರ್ದೇಶನ ಕೊಟ್ಟರು.
‘ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ನಡೆಯಬೇಕು. ಆದರೆ, ಅಥಣಿಯ ಹಿಂದಿನ ಶಾಸಕರು ಕೆಡಿಪಿ ಸಭೆಯನ್ನೇ ನಡೆಸಿಲ್ಲ’ ಎಂದು ದೂರಿದರು.
‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ತೆಲಸಂಗ ಸೇರಿದಂತೆ ಅನೇಕ ಗ್ರಾಮಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು, ಯಾವುದೇ ಗ್ರಾಮದಲ್ಲಿ ನೀರಿನ ಬವಣೆ ತಲೆದೋರದಂತೆ ಕ್ರಮ ಕೈಗೊಳ್ಳಬೇಕು. ಜೂನ್ 10ರಿಂದ ಕರಿ ಮಸೂತಿ ಏತ ನೀರಾವರಿ ಯೋಜನೆ ಮೂಲಕ ಕಾಲುವೆಗಳಿಗೆ ನೀರು ಹರಿಸಲು ಕ್ರಮ ವಹಿಸಬೇಕು’ ಎಂದರು.
‘ಎರಡೂ ತಾಲ್ಲೂಕುಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಕಾಮಗಾರಿ ಕಳಪೆಯಾಗಿವೆ. ಕೂಡಲೇ ಇದನ್ನು ಸರಿಪಡಿಸಬೇಕು. ಇಲ್ಲದಿದ್ದರೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಅರ್ಜಿ ಸಲ್ಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಅಥಣಿ ತಹಸೀಲ್ದಾರ್ ಬಿ.ಸಿ.ಕಡಕಭಾವಿ, ಕಾಗವಾಡ ತಹಸೀಲ್ದಾರ್ ಎಂ.ಎನ್.ಬಳಗಾರ, ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವಿಂದ್ರ ನಾಯ್ಕೋಡಿ, ಉದಯ ಪಾಟೀಲ ಇದ್ದರು.