ವಿಜಯಪುರ: ಲಿಂಬೆ ಕಣಜ ಬಸವನಾಡಿನ ಲಿಂಬೆ, ಈರುಳ್ಳಿ ಬೆಳೆಗಾರ ಈಗ ಬೆಲೆ ಕುಸಿತದಿಂದ ಕಂಗಾಲಾಗಿದ್ದಾನೆ. ವಿಜಯಪುರ ಜಿಲ್ಲೆಯ ಲಿಂಬೆ, ಈರುಳ್ಳಿಗೆ ಮಾರುಕಟ್ಟೆ ಹೊಂದಿದ ದಿಲ್ಲಿ, ಮುಂಬಯಿ ಮಾರುಕಟ್ಟೆಗೆ ಅನ್ಯ ರಾಜ್ಯಗಳ ಉತ್ಪನ್ನಗಳು ಪ್ರವೇಶಿಸಿ ಪೈಪೋಟಿ ನೀಡಿರುವುದೇ ಇದಕ್ಕೆ ಪ್ರಮುಖ ಕಾರಣ.
ವಿಜಯಪುರ ಜಿಲ್ಲೆಯ ಲಿಂಬೆ ರಫ್ತು ಗುಣಮಟ್ಟ ಹೊಂದಿದ್ದು, ಜಿಲ್ಲೆಯಲ್ಲಿ 15,500 ಹೆಕ್ಟೇರ್ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಹೊಂದಿದೆ. ವಿಶೇಷವಾಗಿ ಭೀಮಾ ನದಿ ತೀರದ ಇಂಡಿ ಭಾಗದಲ್ಲಿ ಬೆಳೆಯುವ ಲಿಂಬೆಗೆ ಹೊರ ರಾಜ್ಯ, ಹೊರ ದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಪ್ರತಿ ಡಾಗ್ (ಒಂದು ಡಾಗ್= 1 ಸಾವಿರ ಲಿಂಬೆ) ಚೀಲಕ್ಕೆ ಮುಕ್ತ ಮಾರುಕಟ್ಟೆಯಲ್ಲಿ 7-8 ಸಾವಿರ ರೂ. ದರ ಇರುತ್ತದೆ.
ಆದರೆ ಈಗ ಈ ಬೆಲೆ 1 ಸಾವಿರ ರೂ. ಗೆ ಕುಸಿತವಾಗಿದೆ. ವಿಜಯಪುರ ಎಪಿಎಂಸಿ ಮಾರುಕಟ್ಟೆ ಹೊರತಾಗಿ ಇಂಡಿ ಭಾಗದ ತಾಂಬಾ, ಅಥರ್ಗಾ, ರೂಗಿ ಭಾಗದಲ್ಲಿ ಹೊರ ರಾಜ್ಯಗಳೊಂದಿಗೆ ಲಿಂಬೆ ಉದ್ಯಮ ಹೊಂದಿರುವ ವ್ಯಾಪಾರಿಗಳು ರೈತರಿಂದ ನೇರ ಖರೀದಿಸುತ್ತಿದ್ದಾರೆ. ಇವರಿಂದ ವಾರದಲ್ಲಿ 10-12 ಟನ್ ಲಿಂಬೆ ಅನ್ಯ ರಾಜ್ಯದ ಮಾರುಕಟ್ಟೆಗೆ ಹೋಗುತ್ತಿದೆ. ವಿಜಯಪುರ ಲಿಂಬೆ ಹೆಚ್ಚು ಬೇಡಿಕೆ ಇರುವ ದಿಲ್ಲಿ, ಮುಂಬಯಿ ಮಾರುಕಟ್ಟೆಗೆ ಸೀಮಾಂಧ್ರ, ಕೇರಳ, ರಾಜಸ್ಥಾನದ ಲಿಂಬೆ ಲಗ್ಗೆ ಇಟ್ಟಿದ್ದು, ಜಿಲ್ಲೆಯ ಲಿಂಬೆಯ ಬೆಲೆ ನೆಲ ಕಚ್ಚುವಂತಾಗಿದೆ.
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಲ್ಲ ಹಾಗೂ ಈರುಳ್ಳಿ ಬೆಳೆಗೆ ಪೂರಕ ವಾತಾವರಣ ಸೃಷ್ಟಿಯಾಗಿದ್ದು, ಅ ಧಿಕ ಇಳುವರಿ ಬಂದಿದೆ. ಏಕಕಾಲಕ್ಕೆ ಸ್ಥಳೀಯ ಮಾರುಕಟ್ಟೆ ಪ್ರವೇಶಿಸಿದ್ದರಿಂದ ಬೆಲೆ ಕುಸಿತವಾಗಿದೆ. ಬೆಂಗಳೂರಿನಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿಗೆ ಬೆಲೆ ಇದ್ದೇ ಇದೆ. ದರ ಕುಸಿತ ತಾತ್ಕಾಲಿಕವಷ್ಟೇ.
-ಎಂ.ವಿ. ಶೈಲಜಾ, ಎಪಿಎಂಸಿ ಕಾರ್ಯದರ್ಶಿ, ವಿಜಯಪುರ
ಈರುಳ್ಳಿ ಬೆಳೆಗಾರರ ಕಣ್ಣೀರು
ಈರುಳ್ಳಿ ಬೆಳೆದವರ ಕಥೆ ಇದಕ್ಕಿಂತಲೂ ಕಂಗಾಲೆನಿಸಿದೆ. ಬಸವನಬಾಗೇವಾಡಿ, ಸಿಂದಗಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ನಮ್ಮ ಜಿಲ್ಲೆಯ ಈರುಳ್ಳಿಗೆ ಬೆಂಗಳೂರು, ಹಾಸನ ಸಹಿತ ಹಲವು ಕಡೆಗಳಲ್ಲಿ ಭಾರೀ ಬೇಡಿಕೆ ಇದೆ. ಈ ಬಾರಿ ಪ್ರಕೃತಿ ವಿಕೋಪ ಇಲ್ಲದೆ ಈರುಳ್ಳಿ ಬೆಳೆಗೆ ಪೂರಕ ವಾತಾವರಣ ಇದ್ದುದರಿಂದ ಸಹಜವಾಗಿ ಅ ಧಿಕ ಇಳುವರಿ ಬಂದಿದೆ. ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಏಕಕಾಲಕ್ಕೆ ಮಾರುಕಟ್ಟೆಗೆ ಬರುತ್ತಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದ ಪುಣೆ ಭಾಗದಿಂದ ದೊಡ್ಡ ಗಾತ್ರದ ಈರುಳ್ಳಿ ಮಾರುಕಟ್ಟೆ ಪ್ರವೇಶಿಸಿರುವುದು ಬೆಲೆ ಕುಸಿಯುವಂತೆ ಮಾಡಿದೆ.
Laxmi News 24×7