Breaking News

26/11 ಪಾತಕಿ ತಹಾವ್ವುರ್‌ ಭಾರತಕ್ಕೆ ಗಡಿಪಾರು: ಅಮೆರಿಕ ಕೋರ್ಟ್‌ ಮಹತ್ವದ ಆದೇಶ

Spread the love

ನ್ಯೂಯಾರ್ಕ್‌/ನವದೆಹಲಿ: 2008ರ ಮುಂಬೈನಲ್ಲಿ ಪಾಕಿಸ್ತಾನ ಪ್ರೇರಿತ ಉಗ್ರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವ್ವುರ್‌ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯ ಅನುಮತಿ ನೀಡಿದೆ.

ಇದು ಭಾರತಕ್ಕೆ ಮಹತ್ವದ ಕಾನೂನು ಜಯ ಎಂದು ಬಣ್ಣಿಸಲಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಆಹ್ವಾನ ಮೇರೆಗೆ ಜೂ.22ರಂದು ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಅಧಿಕೃತ ಅಮೆರಿಕ ಭೇಟಿ ಹಿನ್ನೆಲೆಯಲ್ಲಿ ಈ ತೀರ್ಪು ಮಹತ್ವ ಪಡೆದಿದೆ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸೆಂಟ್ರಲ್‌ ಡಿಸ್ಟ್ರಿಕ್ಟ್ ಕೋರ್ಟ್‌ನ ನ್ಯಾಯಾಧೀಶೆ ಜಾಕ್ವೆಲಿನ್‌ ಚೂಲ್‌ಜಿಲಾನ್‌ ಮೇ 16ರಂದೇ ಈ ಬಗ್ಗೆ ಆದೇಶ ನೀಡಿದ್ದರು. ಗುರುವಾರ ಅದರ ವಿವರ ಬಹಿರಂಗಪಡಿಸಲಾಗಿದೆ.

“ಭಾರತ ಮತ್ತು ಅಮೆರಿಕ ಸರ್ಕಾರಗಳು ಹೊಂದಿರುವ ಗಡಿಪಾರು ಒಪ್ಪಂದದ ಅನ್ವಯ ತಹಾವ್ವುರ್‌ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಬೇಕು. ಅದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಎಲ್ಲಾ ದಾಖಲೆಗಳನ್ನು ನ್ಯಾಯಾಲಯ ಪರಿಶೀಲಿಸಿ, ಈ ಆದೇಶ ನೀಡುತ್ತಿದೆ. ಅದರ ಅನ್ವಯ ಅಮರಿಕದ ವಿದೇಶಾಂಗ ಸಚಿವಾಲಯ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ನ್ಯಾಯಾಧೀಶೆ ತಮ್ಮ 48 ಪುಟಗಳ ಆದೇಶದಲ್ಲಿ ಉಲ್ಲೇಖೀಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭಾರತ- ಅಮೆರಿಕನ್‌ ಸಮುದಾಯದ ಮುಖಂಡ, ನ್ಯಾಯವಾದಿ ರವಿ ಭಾತ್ರಾ ಅಮೆರಿಕದ ವಿದೇಶಾಂಗ ಸಚಿವರು ಆದೇಶ ಪಾಲಿಸಬೇಕಾಗುತ್ತದೆ ಎಂದಿದ್ದಾರೆ.

ಅಮೆರಿಕದ ವಿದೇಶಾಂಗ ಸಚಿವ ಆಯಂಟನಿ ಬ್ಲಿಂಕನ್‌ ಹಸ್ತಾಂತರಿಸುವ ಬಗ್ಗೆ ತೀರ್ಮಾನ ಕೈಗೊಂಡ ಬಳಿಕ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗುತ್ತದೆ. ಇದೇ ವೇಳೆ, ಈ ಆದೇಶದ ವಿರುದ್ಧ ರಾಣಾನಿಗೆ ಮೇಲ್ಮನವಿ ಸಲ್ಲಿಸುವ ಅವಕಾಶಗಳಿವೆ. ಆದರೆ, ಅಲ್ಲಿ ಅದು ತಿರಸ್ಕೃತವಾಗುವ ಸಾಧ್ಯತೆಗಳು ಅಧಿಕ.

2009ರಲ್ಲಿ ಬಂಧನ:
ಘಾತಕ ಕೃತ್ಯದ ರೂವಾರಿಯನ್ನು 2009ರ ಅಕ್ಟೋಬರ್‌ನಲ್ಲಿ ಅಮೆರಿಕದ ಅಧಿಕಾರಿಗಳು ಬಂಧಿಸಿದ್ದರು. ಅಮೆರಿಕದಲ್ಲಿ ಆತನ ಕಿಡಿಗೇಡಿತನದ ಕೃತ್ಯಗಳ ಬಗ್ಗೆ ವಿಚಾರಣೆ ನಡೆದು, 2011ರಲ್ಲಿ ಲಷ್ಕರ್‌ ಉಗ್ರ ಸಂಘಟನೆಗೆ ನೆರವು ನೀಡಿದ್ದು ಸಾಬೀತಾದ್ದರಿಂದ 35 ವರ್ಷಗಳ ಕಾರಾಗೃಹ ವಾಸ ಶಿಕ್ಷೆ ಅನುಭವಿಸುತ್ತಿದ್ದಾನೆ. ಪ್ರಸ್ತುತ ಆತ ಲಾಸ್‌ ಏಂಜಲೀಸ್‌ನ ಜೈಲಿನಲ್ಲಿ ಆತನನ್ನು ಇರಿಸಲಾಗಿದೆ. 2019ರ ಡಿಸೆಂಬರ್‌ನಲ್ಲಿ ಭಾರತ ಸರ್ಕಾರ ರಾಣಾನನ್ನು ಗಡಿಪಾರು ಮಾಡುವ ಬಗ್ಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿತ್ತು.

ಗಲ್ಲಿಗೆ ಏರಿಸಿ:
ರಾಣಾನನ್ನು ಗಡಿಪಾರು ಮಾಡುವ ಆದೇಶದ ಬಗ್ಗೆ ಮುಂಬೈ ದಾಳಿಯಲ್ಲಿ ಗಾಯಗೊಂಡ ಇಬ್ಬರು ಮಹಿಳೆಯರು ಮತ್ತು ಅಸುನೀಗಿದ ಕುಟುಂಬವರ ಸದಸ್ಯರು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಆತನಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ಏನಿದು ಘಟನೆ?
2008ರ ನ.26ರಂದು 9 ಮಂದಿ ಪಾಕಿಸ್ತಾನಿ ಉಗ್ರರು ಮುಂಬೈಗೆ ನುಗ್ಗಿ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅಮೆರಿಕದ ಆರು ಮಂದಿ ಸೇರಿ ಒಟ್ಟು 166 ಮಂದಿ ಅಸುನೀಗಿದ್ದರು. ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು, ಉಗ್ರ ಅಜ್ಮಲ್‌ ಕಸಬ್‌ನನ್ನು ಜೀವಂತವಾಗಿ ಹಿಡಿದಿದ್ದರು. ಸುದೀರ್ಘ‌ ವಿಚಾರಣೆ ಬಳಿಕ 2021ರ ನ.21ರಂದು ಆತನನ್ನು ಗಲ್ಲಿಗೇರಿಸಲಾಗಿತ್ತು.

ನಿರಂತರ ಸಂಪರ್ಕ: ವಿದೇಶಾಂಗ ಇಲಾಖೆ
ರಾಣಾನ ವಿಚಾರಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯ ಅಮೆರಿಕದ ಜತೆಗೆ ನಿಕಟ ಸಂಪರ್ಕ ಇರಿಸಿಕೊಂಡಿದೆ. ಗಡಿಪಾರು ಪ್ರಕ್ರಿಯೆ ಕ್ಷಿಪ್ರವಾಗಿ ನಡೆಯುವಂತೆ ಮಾತುಕತೆ ನಡೆಸುತ್ತೇವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ ಕ್ವಾಟ್ರಾ ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾ ಕೋರ್ಟ್‌ ನೀಡಿದ ಆದೇಶದ ಪ್ರತಿಯನ್ನೂ ಅಧ್ಯಯನ ಮಾಡಿದ್ದೇವೆ. ಇದೇ ವೇಳೆ, ಹಿರೋಶಿಮಾದಲ್ಲಿ ಜಿ7 ರಾಷ್ಟ್ರಗಳ ಸಮ್ಮೇಳನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಬೈಡೆನ್‌ ನಡುವೆ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆಯೇ ಎಂಬ ಬಗ್ಗೆ ಅವರು ಖಚಿತ ಉತ್ತರ ನೀಡಲಿಲ್ಲ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ